ಬೆಂಗಳೂರು: ನಗರದಲ್ಲಿ ಖ್ಯಾತ ಲೈಂಗಿಕ ತಜ್ಞೆ ಹಾಗೂ ವೈದ್ಯೆಯೊಬ್ಬರಿಗೆ ನಿರಂತರ ಲೈಂಗಿಕ ಕಿರುಕುಳ ಮತ್ತು ಹಿಂಬಾಲನೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರು ಪ್ರಕಾರ, ವೈದ್ಯೆ ಮನೆಗೆ ತೆರಳುವ ಸಂದರ್ಭಗಳಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಪದೇಪದೇ ಹಿಂಬಾಲಿಸುತ್ತಿದ್ದ. ತನ್ನ ಹೆಸರು ಅಥವಾ ಗುರುತನ್ನು ಕೇಳಿದರೂ ಹೇಳದೆ, ಸಂಶಯಾಸ್ಪದವಾಗಿ ವೈದ್ಯೆಯ ಎದುರು ನಿಂತುಕೊಳ್ಳುತ್ತಿದ್ದನು ಎಂದು ಆರೋಪಿಸಲಾಗಿದೆ.
ಕಳೆದ ಮೂರು ತಿಂಗಳಿನಿಂದ ಕಾಮುಕನ ಕಾಟ ತೀವ್ರವಾಗಿದ್ದು, ಸಹಿಸಲು ಸಾಧ್ಯವಾಗದೆ ವೈದ್ಯೆ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದ ವೇಳೆ, ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
