
ಬೆಂಗಳೂರು: ರಾಜ್ಯದಾದ್ಯಂತ ಈರುಳ್ಳಿ ಬೆಲೆ ಕುಸಿತದಿಂದ ರೈತರು ಕಣ್ಣೀರಲ್ಲಿ ಮುಳುಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ನಿರಂತರ ಇಳಿಕೆ ಕಾಣುತ್ತಿದ್ದು, ದಾವಣಗೆರೆ, ಬಾಗಲಕೋಟೆ, ಗದಗ ಸೇರಿದಂತೆ ಹಲವು ಜಿಲ್ಲೆಗಳ ಎಪಿಎಂಸಿ ಮಾರುಕಟ್ಟೆಗಳಲ್ಲಿ ಈರುಳ್ಳಿ ಕಿಲೋಗೆ ಕೇವಲ ₹2 ರಿಂದ ₹4 ರವರೆಗೆ ಮಾತ್ರ ಬೆಲೆ ದೊರೆಯುತ್ತಿದೆ.
ದಾವಣಗೆರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ಕಿಲೋಗೆ ₹2, ಮಧ್ಯಮ ₹3, ಮತ್ತು ದೊಡ್ಡ ಗಾತ್ರದ ಈರುಳ್ಳಿ ಕೇವಲ ₹4 ಗೆ ಮಾರಾಟವಾಗುತ್ತಿದೆ. ರೈತರು ಹೇಳುವಂತೆ, ಸಾರಿಗೆ ಮತ್ತು ಕೂಲಿ ಖರ್ಚು ಕೂಡ ತೀರಿಸುವಂತಿಲ್ಲ, ಎಕರೆಗೆ ಸರಾಸರಿ ₹50,000 ರಷ್ಟು ನಷ್ಟ ಉಂಟಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾನು ಎರಡು ಎಕರೆಯಲ್ಲಿ ಬೆಳೆದಿದ್ದೆ. ಒಟ್ಟು 180 ಚೀಲ ಈರುಳ್ಳಿ ತರಿದ್ದೆ. ಸಣ್ಣದು ₹2, ಮಧ್ಯಮ ₹3, ದೊಡ್ಡದು ₹4 ಗೆ ಮಾರಿದೆ. ಟ್ರಾನ್ಸ್ಪೋರ್ಟ್ ಬಾಡಿಗೆಗೆ ₹18,000 ಹೋಗಿದೆ, ಕೂಲಿ ₹4,000 ಕೊಟ್ಟಿದ್ದೇನೆ. ನನ್ನ ಕೈಗೆ ಒಂದು ರೂಪಾಯಿಯೂ ಉಳಿದಿಲ್ಲ,” ಎಂದು ಬಾಗಲಕೋಟೆಯ ರೈತರು ಅಳಲು ವ್ಯಕ್ತಪಡಿಸಿದರು.
ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ರೈತರ ಬೇಡಿಕೆ
ರೈತರು ಸರ್ಕಾರಕ್ಕೆ ಮನವಿ ಮಾಡಿದ್ದು, ಕನಿಷ್ಠ ಬೆಂಬಲ ದರ (MSP) ಘೋಷಣೆ ಮಾಡಬೇಕು ಹಾಗೂ ಮಾರುಕಟ್ಟೆಯಲ್ಲಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ. ಮಾರುಕಟ್ಟೆಗೆ ಹೆಚ್ಚುವರಿ ಈರುಳ್ಳಿ ಆಗಮನ, ಖರೀದಿದಾರರ ಕೊರತೆ, ಮತ್ತು ಸಾರಿಗೆ ವೆಚ್ಚದ ಏರಿಕೆ ಇವುಗಳೆಲ್ಲ ಸೇರಿ ಬೆಲೆ ಕುಸಿತಕ್ಕೆ ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ತಜ್ಞರ ಪ್ರಕಾರ, ಈ ಬಾರಿ ಉತ್ತಮ ಬೆಳೆಯಾದರೂ ಖರೀದಿಯಿಲ್ಲದ ಕಾರಣ ರೈತರು ಆರ್ಥಿಕವಾಗಿ ನಲುಗಿದ್ದಾರೆ. ಸಮರ್ಪಕ ಮಾರುಕಟ್ಟೆ ಹಸ್ತಕ್ಷೇಪ ಇಲ್ಲದಿದ್ದರೆ ಮುಂದಿನ ಹಂಗಾಮಿನಲ್ಲಿ ರೈತರು ಈರುಳ್ಳಿ ಬೆಳೆ ಬಿಟ್ಟುಬಿಡುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.