Home Uncategorized ಬೆಂಗಳೂರಿನಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ತಂದೆ-ಮಗ ಸಾವು

ಬೆಂಗಳೂರಿನಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ತಂದೆ-ಮಗ ಸಾವು

23
0
Father, son died while riding a bike in Bangalore
Father, son died while riding a bike in Bangalore

ಬೆಂಗಳೂರು:

ಬೆಂಗಳೂರಿನಲ್ಲಿ ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವ್ಯಕ್ತಿ ಮತ್ತು ಅವರ ಮಗ ಹಿಟ್ ಅಂಡ್ ರನ್ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಎಂಎಸ್ ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಬಳಿಯ ಇಸ್ರೋ ವೃತ್ತದಲ್ಲಿ ಭಾನುವಾರ ತಡರಾತ್ರಿ ಈ ಅವಘಡ ಸಂಭವಿಸಿದೆ.

ಕಾರಿನಲ್ಲಿದ್ದವರು ಪಾನಮತ್ತರಾಗಿದ್ದು, ಬೈಕ್‌ಗೆ ಡಿಕ್ಕಿ ಹೊಡೆಯುವ ಮುನ್ನವೇ ಸರಣಿ ಅಪಘಾತದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು 65 ವರ್ಷದ ರಘು ಮತ್ತು ಅವರ 25 ವರ್ಷದ ಮಗ ಚಿರಂಜೀವಿ ಎಂದು ಗುರುತಿಸಲಾಗಿದೆ. ರಘು ಕೋರಮಂಗಲದಲ್ಲಿ ಪುಸ್ತಕ ಮಳಿಗೆ ನೋಡಿಕೊಂಡಿದ್ದರು.

ಅಪಘಾತದಲ್ಲಿ ಮತ್ತೊಬ್ಬ ವಾಸು ಎಂಬುವವರು ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಮೊದಲು ಆಟೋಗೆ ಡಿಕ್ಕಿ ಹೊಡೆದಿದೆ. ಆಟೋ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಈ ಘಟನೆಯಿಂದ ತಪ್ಪಿಸಿಕೊಳ್ಳಲು ಘಟನಾ ಸ್ಥಳದಿಂದ ವೇಗವಾಗಿ ಹೊರಡಲು ಪ್ರಯತ್ನಿಸುತ್ತಿರುವಾಗ, ಕಾರು ಪಾದಚಾರಿ ವಾಸುಗೆ ಡಿಕ್ಕಿ ಹೊಡೆದಿದೆ. ನಂತರ, ಕಾರು ಸಂತ್ರಸ್ತರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ತಂದೆ-ಮಗ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸ್ಥಳೀಯರು ವಾಹನವನ್ನು ತಡೆದು ಆರೋಪಿ ಆಕಾಶ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಉಳಿದವರು ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಆಕಾಶ್ ರಾಜಕೀಯ ಹಿನ್ನೆಲೆ ಹೊಂದಿದ್ದು, ಆತನ ತಾಯಿ ಜಿಲ್ಲಾ ಪಂಚಾಯತ್ ಸದಸ್ಯೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಉಳಿದ ಆರೋಪಿಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಅವರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ಘಟನೆ ಸಂಬಂಧ ಸದಾಶಿವನಗರ ಸಂಚಾರ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here