ಬೆಂಗಳೂರು:
ದೇಶ ಮತ್ತು ಜಗತ್ತು ಹಿಂದೆಂದೂ ಕಂಡಿರದ, ಮಾನವಕುಲಕ್ಕೇ ಸವಾಲಾಗಿದ್ದ ಕೊರೊನಾ ಮಹಾಮಾರಿಯನ್ನು ಕರ್ನಾಟಕ ಸರ್ಕಾರ ಅತ್ಯುತ್ತಮವಾಗಿ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಸರ್ಕಾರವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಕರ್ನಾಟಕ ರಾಜ್ಯ ಮೊದಲಿಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಾಗೂ ಈಗ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೊರೊನಾ ವಿರುದ್ಧ ಸಮರ್ಥವಾಗಿ ಹೋರಾಡಿದೆ. ಈ ವರೆಗೆ ಸುಮಾರು 5.2 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಆ ಪೈಕಿ 4 ಕೋಟಿ ಜನರಿಗೆ ಮೊದಲ ಡೋಸ್ ನೀಡಲಾಗಿದ್ದು, 1.16 ಲಕ್ಷ ಜನರಿಗೆ ಎರಡನೇ ಡೋಸ್ ಲಸಿಕೆಯನ್ನೂ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ. 90ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡುವ ವಿಶ್ವಾಸ ನನಗಿದೆ. ಒಟ್ಟಾರೆ ಕೊರೊನಾ ವಿರುದ್ಧ ರಾಜ್ಯ ಸರ್ಕಾರ ಅತ್ಯುತ್ತಮವಾಗಿ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವದಾದ್ಯಂತ ಸರ್ಕಾರಗಳು ಕೋರೊನಾ ವಿರುದ್ಧ ಹೋರಾಡುತ್ತಿದ್ದರೆ, ಭಾರತದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಜೊತೆಗೆ ದೇಶದ 130 ಕೋಟಿ ಜನತೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೋವಿಡ್ ವಾರಿಯರ್ ಗಳು, ರಕ್ಷಣಾ ಸಿಬ್ಬಂದಿ ಹಾಗೂ ಸಫಾಯಿ ಕರ್ಮಚಾರಿಗಳು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಠಿಣ ನಿರ್ಬಂಧಗಳನ್ನು ಪಾಲಿಸಿದೆವು. ನಂತರ ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನ ನಮ್ಮ ದೇಶದಲ್ಲಿ ಪ್ರಾರಂಭವಾಯಿತು. ಇಂದು ನಾವು ವಿಶ್ವದಲ್ಲಿಯೇ ಅತಿ ಹೆಚ್ಚು ಲಸಿಕೆ ನೀಡಿದ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದು ಅವರು ನುಡಿದರು.
ದೇಶದಲ್ಲಿ ಲಸಿಕೆ ಅಭಿಯಾನವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿದ್ದು, ಎರಡು ದಿನಗಳ ಹಿಂದೆ ಒಂದೇ ದಿನದಲ್ಲಿ 1.36 ಕೋಟಿ ಗೂ ಹೆಚ್ಚು ಡೋಸ್ ಲಸಿಕೆ ನೀಡುವ ಮೂಲಕ ನಮ್ಮ ದೇಶದ ದಾಖಲೆಯನ್ನೇ ಮುರಿದು ಹೊಸ ದಾಖಲೆ ನಿರ್ಮಿಸಿದ್ದೇವೆ.
ನರೇಂದ್ರ ಮೋದಿ ಸರ್ಕಾರ ಸದಾ ಹಿಂದುಳಿದ ವರ್ಗಗಳು, ದಲಿತರು, ಬುಡಕಟ್ಟು ಜನರ ಹಿತ ಚಿಂತನೆ ಮಾಡುತ್ತದೆ. ಕೋವಿಡ್ 19 ಸಂಕಷ್ಟದ ಹೆಚ್ಚಿನ ಹೊರೆ ಬಡವರ ಮೇಲೆ ಬಿದ್ದಿದೆ. ದಿನ ದಿನ ದುಡಿದು ತಿನ್ನುವವರು ಊಟಕ್ಕಿಲ್ಲದ ಸ್ಥಿತಿ ಎದುರಾಗಿತ್ತು. ಆದರೆ ಮೊದಲನೇ ಅಲೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಮೇ ತಿಂಗಳಿನಿಂದ ನವೆಂಬರ್ ತಿಂಗಳ ವರೆಗೆ ತಲಾ 5 ಕೆಜಿ ಧಾನ್ಯ ಉಚಿತವಾಗಿ ವಿತರಿಸುವ ಕೆಲಸವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ. 80 ಕೋಟಿ ಜನರಿಗೆ 10 ತಿಂಗಳ ಕಾಲ ಆಹಾರ ಧಾನ್ಯ ಉಚಿತವಾಗಿ ವಿತರಿಸಲಾಗಿದೆ ಎಂದು ಅವರು ಹೇಳಿದರು.
ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯ ಸಮಸ್ಯೆ ದೇಶದೆಲ್ಲೆಡೆ ತಲೆದೋರಿತು. ಆಗ ಸಾವಿರಾರು ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಯಿತು. ಮುಂದೆ ಎದುರಾಗ ಬಹುದಾದ ಆಕ್ಸಿಜನ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಭಾರತ ಆತ್ಮ ನಿರ್ಭರತೆಯನ್ನು ಸಾಧಿಸಲಿದೆ ಎಂಬುದನ್ನು ಅತ್ಯಂತ ವಿಶ್ವಾಸದಿಂದ ಹೇಳಬಲ್ಲೆ ಎಂದು ಅವರು ನುಡಿದರು.
ಕೊರೊನಾ ವಿರುದ್ಧ ಕೇಂದ್ರ, ರಾಜ್ಯ ಸರ್ಕಾರಗಳು ನಡೆಸುವ ಹೋರಾಟದಲ್ಲಿ ಜನರ ಸಹಯೋಗ ಅತಿ ಅಗತ್ಯ. ಕೆಲವು ವರ್ಗ, ಸಮುದಾಯ, ಕೆಲವು ಜಿಲ್ಲೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಕೆ ಕಂಡು ಬರುತ್ತಿದೆ. ಇದನ್ನು ನಿವಾರಿಸಿ, ನಮ್ಮ ಕುಟುಂಬದವರು, ಬಳಗದವರು, ನೆರೆಹೊರೆಯವರು ಯಾವುದೇ ಅಳುಕಿಲ್ಲದೆ ಲಸಿಕೆ ಪಡೆಯುವ ವಾತಾವರಣ ನಿರ್ಮಿಸುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರದೂ ಆಗಿದೆ ಎಂದರು.
ಶೇ ನೂರರಷ್ಟು ಲಸಿಕೆ ನೀಡುವುದೇ ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸುವ ಮಾರ್ಗ. ಭಾರತ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಒದಗಿಸುತ್ತಿದೆ. ಲಸಿಕೆ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಿ, ಲಸಿಕೆ ಹಾಕಿಸಿಕೊಳ್ಳುವಂತೆ ಜನರ ಮನವೊಲಿಸಲು ಸಾರ್ವಜನಿಕರು ಹಾಗೂ ವಿಶೇಷವಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಸದಸ್ಯರು, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರು ಮತ್ತಿತರ ಗಣ್ಯರು ಭಾಗವಹಿಸಿದ್ದರು.