ಎನ್ಎಸ್ಇ ಅಕಾಡೆಮಿ ಜತೆ ಒಡಂಬಡಿಕೆಗೆ ರಾಜ್ಯದ ಒಲವು
ಬೆಂಗಳೂರು:
ರಾಜ್ಯದ ಕಾಲೇಜು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯನ್ನು ಸಾಧ್ಯವಾಗಿಸುವ ಗುರಿಯುಳ್ಳ ಹಣಕಾಸು ವಿಚಾವಾರಗಳ ಜಾಗೃತಿ ಕಾರ್ಯಕ್ರಮವನ್ನು ಜಾರಿ ಮಾಡುವ ಸಂಬಂಧ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ಎಸ್ಇ) ಮತ್ತು ಉನ್ನತ ಶಿಕ್ಷಣ ಇಲಾಖೆಯ ಭಾಗವಾಗಿರುವ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಒಡಂಬಡಿಕೆ ಮಾಡಿಕೊಳ್ಳಲು ತೀರ್ಮಾನಿಸಿವೆ.
ಈ ಸಂಬಂಧ ಬುಧವಾರ ನಡೆದ ವರ್ಚುಯಲ್ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, `ಎನ್ಎಸ್ಇ ರೂಪಿಸಿರುವ ಈ ಕಾರ್ಯಕ್ರಮದ ಬಗ್ಗೆ ರಾಜ್ಯ ಸರಕಾರವು ಮುಕ್ತವಾಗಿದೆ. ಇಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರಿಂದ ಅವರಿಗೆಲ್ಲ ಆರ್ಥಿಕ ತಿಳಿವಳಿಕೆ, ಉದ್ಯಮಶೀಲತೆ ಕುರಿತು ವೈಜ್ಞಾನಿಕ ತಿಳಿವಳಿಕೆ ಮತ್ತು ಆರ್ಥಿಕ ನಿರ್ವಹಣೆ ಕೌಶಲ್ಯಗಳು ಸುಲಭವಾಗಿ ಸಿಗಲಿವೆ ಎಂದರು.
ಆರ್ಥಿಕ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಎನ್ಎಸ್ಇ ಅಕಾಡೆಮಿ ಮತ್ತು ರಾಜ್ಯದ ಕಾಲೇಜುಗಳ ನಡುವೆ ಬೋಧಕ ವೃಂದ ಮತ್ತು ವಿದ್ಯಾರ್ಥಿಗಳ ಪರಸ್ಪರ ವಿನಿಮಯ ನಡೆಯಲಿದೆ. ಇದರ ಜತೆಗೆ ಸಮಗ್ರ ತರಬೇತಿಯನ್ನೂ ನೀಡಲಾಗುವುದು. ಅಲ್ಲದೆ, ವಿದ್ಯಾರ್ಥಿಗಳಲ್ಲಿ ಆರ್ಥಿಕ ಜಾಗೃತಿ ಮತ್ತು ಸರ್ಟಿಫಿಕೇಶನ್ ಕೂಡ ಇರಲಿದೆ. ಇದರಲ್ಲಿ ಆರ್ಥಿಕ ನೀತಿಗಳು, ಫಿನ್-ಟೆಕ್, ಬಂಡವಾಳ ಮಾರುಕಟ್ಟೆ, ಜಾಗತಿಕ ಮತ್ತು ಸ್ಥಳೀಯ ವಾಣಿಜ್ಯ ಸಂಸ್ಕೃತಿ, ಕೇಂದ್ರೀಯ ಬ್ಯಾಂಕುಗಳು, ಯೋಜನಾಬದ್ಧ ವೆಚ್ಚ ಮುಂತಾದವುಗಳ ಅರಿವು ಸಿಗಲಿದೆ ಎಂದು ಅವರು ಮಾಹಿತಿ ನೀಡಿದರು.
ಎನ್ಎಸ್ಇ ಅಕಾಡೆಮಿಯು ದೇಶದ ಏಳು ರಾಜ್ಯಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು, 70 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. ಇಂತಹ ಕಾರ್ಯಕ್ರಮವನ್ನು ರಾಜ್ಯದಲ್ಲೂ ಜಾರಿಗೆ ತಂದರೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆರ್ಥಿಕ ಜಾಗೃತಿಯ ತರಬೇತಿ ಸುಲಭವಾಗಿ ಸಿಗಲಿದೆ ಎಂದು ಅವರು ತಿಳಿಸಿದರು.
ಈ ವರ್ಚುಯಲ್ ಸಭೆಯಲ್ಲಿ ಎನ್ ಎಸ್ ಇ ಅಕಾಡೆಮಿ ಸಿಇಒ ಅಭಿಲಾಷ ಮಿಶ್ರಾ, ಸಹ ಉಪಾಧ್ಯಕ್ಷ ಡಾ.ಅಗ್ನಾ ಫರ್ನಂಡೇಜ್, ಮುಖ್ಯ ವ್ಯವಸ್ಥಾಪಕ ಎಸ್. ರಂಗನಾಥನ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಡಾ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ರಾಣಿಚೆನ್ನಮ್ಮ ವಿವಿ ಕುಲಪತಿ ಪ್ರೊ ರಾಮಚಂದ್ರಗೌಡ ವರ್ಚುವಲ್ ನಲ್ಲಿ ಭಾಗವಹಿಸಿದ್ದರು.