ಬೆಂಗಳೂರು: ಕನ್ನಡ ನಟ ಮತ್ತು ದಿವಂಗತ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ ಚಾಲನೆ ಮಾಡುತ್ತಿದ್ದ ಕಾರು, ಬೈಕ್‌ಗಾಗಿ ಡಿಕ್ಕಿಯಾದ ಪರಿಣಾಮ ಯುವಕನ ಕಾಲು ಮುರಿದು ಗಾಯಗೊಂಡಿರುವ ಘಟನೆ ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ರಕ್ಷಕ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವೇಣುಗೋಪಾಲ್ ಎಂಬ ಯುವಕ ತನ್ನ ಸ್ನೇಹಿತೆ ಅನುಷಾ ಜೊತೆ ಥಣಿಸಂದ್ರದಿಂದ ದಾಸರಹಳ್ಳಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಮಾನ್ಯತಾ ಟೆಕ್ ಪಾರ್ಕ್ ಮಾರ್ಗದಲ್ಲಿ ಎದುರಿಗೆ ಬರುತ್ತಿದ್ದ ರಕ್ಷಕ್ ಚಾಲನೆ ಮಾಡುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಯುವಕನ ಎಡ ಕಾಲಿನ ಮೂಳೆ ಮುರಿದಿದ್ದು, ತಕ್ಷಣವೇ ಟ್ಯಾಕ್ಸಿಯಲ್ಲಿ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿಡ್ಲಘಟ್ಟ ಮೂಲದ ವೇಣುಗೋಪಾಲ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಘಟನೆ ಬಗ್ಗೆ ಅನುಷಾ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಹೆಣ್ಣೂರು ಸಂಚಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಿದ್ದು, ಡಿಕ್ಕಿಗೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.