ಬೆಂಗಳೂರು:
ನಾಮಪತ್ರ ಹಿಂಪಡೆಯುವಂತೆ ಜೆಡಿಎಸ್ ಅಭ್ಯರ್ಥಿಯೊಬ್ಬರಿಗೆ ಆಮಿಷ ಒಡ್ಡಿದ ಆರೋಪದ ಮೇಲೆ ಸಚಿವ ವಿ.ಸೋಮಣ್ಣ ವಿರುದ್ಧ ಶನಿವಾರ ಎಫ್ಐಆರ್ ದಾಖಲಾಗಿದೆ.
ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿ. ಸೋಮಣ್ಣನವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯಥಿ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು) ಅವರಿಗೆ ನಾಮಪತ್ರ ಹಿಂಪಡೆಯುವಂತೆ ಒತ್ತಾಯಿಸಿ ಆಮಿಷ ಒಡ್ಡಿದ್ದರು ಎನ್ನಲಾಗಿದೆ.
ಈ ಆಮಿಷ ಒಡ್ಡಿದ ಮತ್ತು ನಾಮಪತ್ರ ಹಿಂಪಡೆಯುವಂತೆ ಸೋಮಣ್ಣ ಮತ್ತು ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ ಅಲಿಯಾಸ್ ಆಲೂರು ಮಲ್ಲು ನಡುವೆ ನಡೆದ ಮಾತುಕತೆಯ ಆಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ.
ಸೋಮಣ್ಣ ಅವರು ಮಲ್ಲಿಕಾರ್ಜುನ ಸ್ವಾಮಿಗೆ 50 ಲಕ್ಷ ನಗದು ನೀಡಿದ್ದರು ಎನ್ನಲಾಗಿದ್ದು, ಮಲ್ಲಿಕಾರ್ಜುನ ಸ್ವಾಮಿ ಅದನ್ನು ಒಪ್ಪಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಈ ಕುರಿತು ಭಾರತ ಚುನಾವಣಾ ಆಯೋಗದ (ಇಸಿಐ) ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥ ಡಾ.ಬಿ.ಆರ್.ಜಯಣ್ಣ, ಮ್ಯಾಜಿಸ್ಟ್ರೇಟ್ ಶ್ರೇಣಿಯ ಅಧಿಕಾರಿ ಚಾಮರಾಜನಗರದ ಪೊಲೀಸರಿಗೆ ದೂರು ನೀಡಿದ್ದು, ದೂರು ಹಿನ್ನೆಲೆಯಲ್ಲಿ ವಿ. ಸೋಮಣ್ಣ ಸೇರಿದಂತೆ ಮೂವರ ವಿರುದ್ಧ ಚಾಮರಾಜನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸೋಮಣ್ಣ ಮತ್ತು ಅವರ ಇಬ್ಬರು ಸಹಾಯಕರಾದ ನಟರಾಜು ಮತ್ತು ಸುದೀಪ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 171 ಇ ಮತ್ತು 171 ಎಫ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫಾಸ್ಟ್ ಟ್ರ್ಯಾಕ್ ಮೋಡ್‌ನಲ್ಲಿ ಅಪರಾಧಿ ಎಂದು ಸಾಬೀತಾದರೆ, ಪ್ರಜಾಪ್ರತಿನಿಧಿ ಕಾಯ್ದೆ, 1951 ರ ಸೆಕ್ಷನ್ 8 (1) (ಎ) ಅಡಿಯಲ್ಲಿ ಸೋಮಣ್ಣ ಅವರ ಅಭ್ಯರ್ಥಿತನವನ್ನು ಅನರ್ಹಗೊಳಿಸಬಹುದಾಗಿದೆ.
ಚುನಾವಣೆಯ ನಂತರ ಅವರು ತಪ್ಪಿತಸ್ಥರೆಂದು ಕಂಡುಬಂದರೆ, ಒಂದು ವಿಜಯಶಾಲಿಯಾದರೂ ಚುನಾವಣೆ ಅನೂರ್ಜಿತವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಅವರು, ಇದು ರಾಜಕೀಯ ಪ್ರೇರಿತ. ಆಡಿಯೋ ಕ್ಲಿಪ್ ಅನ್ನು ಸೃಷ್ಟಿಸಲಾಗಿದೆ. ಸೋಮಣ್ಣ ವಿರುದ್ಧ ನಡೆಸಲಾಗಿರುವ ಪಿತೂರಿ ಇದು. ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮಣ್ಣ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.