ಹಾಸನ: ಪ್ರಜ್ವಲ್ ರೇವಣ್ಣ ಕಾಮದ ವಿಡಿಯೋ ಕೇಸ್ ಗೆ ಸಂಬಂಧಿಸಿದಂತೆ ತಂದೆ ರೇವಣ್ಣ ಮೇಲೂ FIR ದಾಖಲಾಗಿದೆ.
ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಎ1 ಆರೋಪಿ ಹೆಚ್.ಡಿ.ರೇವಣ್ಣ, ಎ2 ಪ್ರಜ್ವಲ್ ರೇವಣ್ಣ ಆಗಿದ್ದು, ಈ ಹಿಂದೆ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆ ದೂರು ಆಧರಿಸಿ ಪೊಲೀಸರು FIR ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 354A (ಲೈಂಗಿಕ ಕಿರುಕುಳ ಆರೋಪ), 354D (ಮಹಿಳೆಗೆ ಮುಜುಗರ ಆಗುವಂತೆ ಮಾಡುವುದು), 506 (ಬೆದರಿಕೆ), 509 (ಮಹಿಳೆ ಮಾನಕ್ಕೆ ಹಾನಿ) ರಡಿ FIR ದಾಖಲಿಸಲಾಗಿದೆ. ಹಲವು ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ದೃಶ್ಯಗಳು ಹರಿದಾಡಿದ್ದವು. ಹೀಗಾಗಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.
ನಮ್ಮ ಪತಿಗೆ ಹೆಚ್.ಡಿ.ರೇವಣ್ಣ ತಮ್ಮ ಡೇರಿಯಲ್ಲಿ ಕೆಲಸ ಕೊಡಿಸಿದ್ದರು. ಬಳಿಕ 2015ರಲ್ಲಿ ಹಾಸ್ಟೆಲ್‌ವೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿಸಿದ್ದರು. ನಂತರ ತಮ್ಮ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬರುವಂತೆ ರೇವಣ್ಣ ಹೇಳಿದ್ದರು. ಅಡುಗೆ ಕೆಲಸಕ್ಕೆ ಸೇರಿಕೊಂಡ ಬಳಿಕ ಭವಾನಿ ರೇವಣ್ಣ ಮನೆಯಲ್ಲಿಲ್ಲದ ವೇಳೆ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೊಠಡಿಯಲ್ಲಿದ್ದಾಗ ಹಣ್ಣು ನೀಡುವ ನೆಪದಲ್ಲಿ ಸೀರೆ ಹಿಡಿದು ಎಳೆದಾಡಿದ್ದಾರೆ. ಅಡುಗೆ ಮನೆಗೆ ಬಂದು ಪ್ರಜ್ವಲ್ ಸಹ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಪ್ರಜ್ವಲ್ ರೇವಣ್ಣ ಅಸಭ್ಯವಾಗಿ ವರ್ತಿಸಿದ್ದಾರೆ. ಮೈಗೆ ಎಣ್ಣೆ ಹಚ್ಚಬೇಕೆಂದು ನನ್ನನ್ನು ಕರೆಸಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ನನ್ನ ಮಗಳಿಗೂ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಪದೇಪದೆ ಕಾಲ್ ಮಾಡಿದ್ದಕ್ಕೆ ಪುತ್ರಿ ಪ್ರಜ್ವಲ್ ನಂಬರ್ ಬ್ಲಾಕ್ ಮಾಡಿದ್ದರು. ಲೈಂಗಿಕ ಕಿರುಕುಳ ಹೆಚ್ಚಾದಾಗ ಕೆಲಸಬಿಟ್ಟು ಹೋಗಿದ್ದಾಗಿ ಸಂತ್ರಸ್ತೆ ಹೇಳಿದ್ದು, ಅಶ್ಲೀಲ ವಿಡಿಯೋ ವೈರಲ್ ಆದ ಬಳಿಕ ಆತಂಕಗೊಂಡು ದೂರು ನೀಡಿದ್ದೇನೆ ಎಂದು ಉಲ್ಲೇಖಿಸಲಾಗಿದೆ.