Home ರಾಜಕೀಯ ಇವೆಂಟ್ ಮ್ಯಾನೇಜ್‌ ಮೆಂಟ್ ಕಂಪೆನಿಗೆ ವಂಚಿಸಿ, ಜೀವ ಬೆದರಿಕೆ ಹಾಕಿರುವ ಆರೋಪದಡಿ ಕೇಂದ್ರ ಸಚಿವ ಸೋಮಣ್ಣ...

ಇವೆಂಟ್ ಮ್ಯಾನೇಜ್‌ ಮೆಂಟ್ ಕಂಪೆನಿಗೆ ವಂಚಿಸಿ, ಜೀವ ಬೆದರಿಕೆ ಹಾಕಿರುವ ಆರೋಪದಡಿ ಕೇಂದ್ರ ಸಚಿವ ಸೋಮಣ್ಣ ಪುತ್ರ ಸೇರಿ ಮೂವರ ವಿರುದ್ಧ ಎಫ್‍ಐಆರ್

46
0

ಬೆಂಗಳೂರು: ಇವೆಂಟ್ ಮ್ಯಾನೇಜ್‌ ಮೆಂಟ್ ಕಂಪೆನಿಗೆ ವಂಚಿಸಿ, ಜೀವ ಬೆದರಿಕೆ ಹಾಕಿರುವ ಆರೋಪದಡಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣರ ಪುತ್ರ ಅರುಣ್ ಸೋಮಣ್ಣ ಸೇರಿದಂತೆ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.

ಈ ಕುರಿತು ತೃಪ್ತಿ ಹೆಗಡೆ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರಿನ ಅರ್ಜಿಯ ವಿಚಾರಣೆ ನಡೆಸಿದ ನಗರದ 37ನೇ ಎಸಿಎಂಎಂ ನ್ಯಾಯಾಲಯ ತನಿಖೆ ನಡೆಸುವಂತೆ ಆದೇಶಿಸಿತ್ತು.

ಅದರನ್ವಯ ಅರುಣ್ ಸೋಮಣ್ಣ, ಜೀವನ್ ಕುಮಾರ್ ಹಾಗೂ ಪ್ರಮೋದ್ ರಾವ್ ಎಂಬುವರ ವಿರುದ್ಧ ಐಪಿಸಿ ಸೆಕ್ಷನ್ 506, 34, 504, 387, 420, 477ಂ, 323, 327,347 ಹಾಗೂ 354 (ದೈಹಿಕ ಹಿಂಸೆ, ಅವಮಾನ, ಜೀವಭಯ, ವಂಚನೆ, ಅಪಹರಣ) ಸೇರಿದಂತೆ ಮತ್ತಿತರ ಆರೋಪಗಳಡಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ವಿವರ: ದೂರುದಾರೆಯಾದ ತೃಪ್ತಿ ಹೆಗಡೆ ಹಾಗೂ ಮಧ್ವರಾಜ್ ಎಂಬುವರು ಸುಮಾರು 23 ವರ್ಷಗಳಿಂದ ಇವೆಂಟ್ ಮ್ಯಾನೇಜ್‌ ಮೆಂಟ್ ಕಂಪೆನಿ ನಡೆಸುತ್ತಿದ್ದು, 2013ರಲ್ಲಿ ಸರಕಾರಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾಗ ಸಚಿವ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಅವರ ಪರಿಚಯವಾಗಿತ್ತು. 2017ರಲ್ಲಿ ಅರುಣ್ ಸೋಮಣ್ಣ ಪುತ್ರಿಯ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸುವ ಜವಾಬ್ದಾರಿಯನ್ನು ಮಧ್ವರಾಜ್ ಒಡೆತನದ ಇವೆಂಟ್ ಮ್ಯಾನೇಜ್‌ ಮೆಂಟ್ ಕಂಪೆನಿಯೇ ನಿರ್ವಹಿಸಿತ್ತು.

ಉತ್ತಮ ಬಾಂಧವ್ಯ ಇದ್ದಿದ್ದರಿಂದ ಅರುಣ್ ಸೋಮಣ್ಣ ಅವರ ಸಲಹೆ ಮೇರೆಗೆ 2019ರಲ್ಲಿ ಅರುಣ್ ಮತ್ತು ಮಧ್ವರಾಜ್ ಜಂಟಿಯಾಗಿ ನೈಬರ್ ಹುಡ್ ಎಂಬ ಇವೆಂಟ್ ಮ್ಯಾನೇಜ್‌ ಮೆಂಟ್ ಕಂಪೆನಿಯನ್ನು ಪಾರ್ಟನರ್‍ಶಿಪ್ ಡೀಡ್ ಆಧಾರದಲ್ಲಿ ಆರಂಭಿಸಿದ್ದರು.

ಕಂಪೆನಿಯಲ್ಲಿ ಮಧ್ವರಾಜ್ ಹೂಡಿಕೆ ಮಾಡಿರದ ಕಾರಣ, ಹೂಡಿಕೆ ಹಾಗೂ ಪಾವತಿಯ ಜವಾಬ್ದಾರಿಯನ್ನು ಅರುಣ್ ಸೋಮಣ್ಣ ಅವರೇ ವಹಿಸಿಕೊಂಡಿದ್ದರು. ನಂತರ ವ್ಯವಹಾರದಲ್ಲಿ ನಷ್ಟವಾದಾಗ ಮಧ್ವರಾಜ್ ಅವರು ಅರುಣ್ ಬಳಿ ವಿಚಾರಿಸಿದಾಗ ಯಾವುದೇ ಮಾಹಿತಿ ನೀಡಲಿಲ್ಲ. ಇದಾದ ಬಳಿಕ ಅರುಣ್ ಅವರು ಮಧ್ವರಾಜ್ ಅವರನ್ನು ಕಂಪೆನಿಯ ಪಾಲುದಾರಿಕೆಗೆ ರಾಜೀನಾಮೆ ಕೊಡುವಂತೆ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಲ್ಲದೆ, ಕಂಪೆನಿಗೆ ಹೊಸ ಪಾಲುದಾರರನ್ನು ಸೇರ್ಪಡೆ ಮಾಡಿಕೊಂಡು, ಮಧ್ವರಾಜ್ ಮತ್ತು ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ. ಕಂಪೆನಿಯಲ್ಲಿ ಮಧ್ವರಾಜ್ ಅವರ ಲಾಭಾಂಶದ ಪ್ರಮಾಣವನ್ನು ಶೇ.30ರಿಂದ ಶೇ.10ಕ್ಕೆ ಇಳಿಕೆ ಮಾಡಲಾಗಿತ್ತು. ಕಂಪೆನಿಯ ಕಚೇರಿ ಇರುವ ಜಾಗದ ಲೀಸ್ ಅಗ್ರಿಮೆಂಟ್ ಬದಲಾವಣೆ, ನಕಲಿ ದಾಖಲೆ ಬಳಸಿ ನೋಂದಣಿ ಹೀಗೆ ಹಲವು ಅಕ್ರಮಗಳನ್ನು ಎಸಗಲಾಗಿದೆ. ಗೂಂಡಾಗಳನ್ನು ಬಿಟ್ಟು ಮಧ್ವರಾಜ್ ಅವರನ್ನ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ, ಚಿತ್ರಹಿಂಸೆ ನೀಡಲಾಗಿದೆ ಎಂದು ತೃಪ್ತಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here