ವಿಜಯಪುರ: ವಿಜಯಪುರ ನಗರದಲ್ಲಿ ಮಂಗಳವಾರ ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿ, ಕಾರ್ ಸರ್ವಿಸ್ ಸೆಂಟರ್ನಲ್ಲಿ ನಿಲ್ಲಿಸಿದ್ದ 20ಕ್ಕೂ ಹೆಚ್ಚು ಕಾರುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಈ ಅವಘಡದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿನಷ್ಟ ಸಂಭವಿಸಿದೆ.
ಗೋಲ್ಗಂಬಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹನುಮಂತ ಕನಮಡಿ ಅವರಿಗೆ ಸೇರಿದ ಎಚ್ಎಂಕೆ (HMK) ಕಾರ್ ಸರ್ವಿಸ್ ಸೆಂಟರ್ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಸರ್ವಿಸ್ ಹಾಗೂ ರಿಪೇರಿಗಾಗಿ ಬಂದಿದ್ದ ಕಾರುಗಳು ಕೆಲವೇ ನಿಮಿಷಗಳಲ್ಲಿ ಬೆಂಕಿಗೆ ಆಹುತಿಯಾಗಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಂಕಿ ತೀವ್ರವಾಗಿ ವ್ಯಾಪಿಸಿಕೊಂಡ ಪರಿಣಾಮ ಸ್ಥಳೀಯರು ಹಾಗೂ ಗ್ಯಾರೇಜ್ ಸಿಬ್ಬಂದಿ ನೀರು ಹಾಕಿ ನಿಯಂತ್ರಣಕ್ಕೆ ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬೆಂಕಿಯ ತೀವ್ರತೆ ಹೆಚ್ಚುತ್ತಿದ್ದಂತೆ ಸಂಪೂರ್ಣ ಸರ್ವಿಸ್ ಸೆಂಟರ್ ಆವರಣವೇ ಹೊತ್ತಿ ಉರಿದಿದೆ.
ಸರ್ವಿಸ್ ಸೆಂಟರ್ ಮಾಲಿಕರ ಹೇಳಿಕೆಯಂತೆ, ರಾತ್ರಿ ಸುಮಾರು 10 ಗಂಟೆಯವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಸಿಬ್ಬಂದಿ ಕೆಲಸ ಮುಗಿಸಿ ಮನೆಗೆ ತೆರಳಿದ ನಂತರ, ತಡರಾತ್ರಿ ಪೊಲೀಸ್ ಇಲಾಖೆ ಕರೆ ಮೂಲಕ ಅಗ್ನಿ ಅವಘಡದ ಮಾಹಿತಿ ದೊರಕಿದೆ. ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಎಲ್ಲವೂ ಸುಟ್ಟುಹೋಗಿತ್ತು.
“ಸುಮಾರು 15ರಿಂದ 20 ಕಾರುಗಳು ಇದ್ದವು. ಯಾವುದನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಂಪೂರ್ಣವಾಗಿ ನಾಶವಾಗಿದೆ,” ಎಂದು ಮಾಲಿಕರು ಅಳಲು ತೋಡಿಕೊಂಡರು.
ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರೂ, ಅದಾಗಲೇ ಎಲ್ಲಾ ವಾಹನಗಳು ಸುಟ್ಟು ಕರಕಲಾಗಿದ್ದವು. ಇದಲ್ಲದೆ, ಸುಮಾರು ₹35 ಲಕ್ಷ ಮೌಲ್ಯದ ಬಿಡಿಭಾಗಗಳು ಮತ್ತು ಉಪಕರಣಗಳು ಸಹ ಬೆಂಕಿಗೆ ಆಹುತಿಯಾಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಉಂಟಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ನಿಖರ ಕಾರಣವನ್ನು ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ವಾಹನ ಮಾಲಿಕರು ಹಾಗೂ ಸರ್ವಿಸ್ ಸೆಂಟರ್ ಮಾಲಿಕರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.
