ಬೆಂಗಳೂರು: ನಗರದ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಎಳೇನಹಳ್ಳಿಯಲ್ಲಿರುವ ಕಸದ ಡಂಪಿಂಗ್ ಯಾರ್ಡ್ನಲ್ಲಿ ಗುರುವಾರ ಬೆಳಗಿನ ಜಾವ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಪಕ್ಕದಲ್ಲೇ ಸಂಗ್ರಹಿಸಿದ್ದ ಗುಜರಿ ವಸ್ತುಗಳಿಗೆ ತಗುಲಿ 15 ಶೆಡ್ಗಳಿಗೆ ವ್ಯಾಪಿಸಿದೆ.
ಗುರುವಾರ ಬೆಳಗಿನ ಜಾವ 3.15ರ ಸುಮಾರಿಗೆ ಕಸದ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಬೆಂಕಿಯ ಕಿಡಿ ಪಕ್ಕದಲ್ಲಿದ್ದ ಗುಜರಿ ವಸ್ತುಗಳಿಗೆ ತಗುಲಿ ಭಾರೀ ಜ್ವಾಲೆಯಾಗಿ, ಅಕ್ಕಪಕ್ಕದಲ್ಲಿದ್ದ 15 ತಾತ್ಕಾಲಿಕ ಶೆಡ್ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸ್ಥಳಕ್ಕೆ ಧಾವಿಸಿ, ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದವು.
ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶೆಡ್ಗಳಲ್ಲಿ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಚಿಂದಿ ಆಯುವ ಕಾರ್ಮಿಕರು ಸಮಯಕ್ಕೆ ಮುನ್ನ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಬೆಂಕಿಯಿಂದಾಗಿ 15 ಶೆಡ್ಗಳು ಸಂಪೂರ್ಣ ನಾಶವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ. ಈ ಪ್ರದೇಶದಲ್ಲಿ ಈ ಹಿಂದೆ ಕೂಡ ಅಗ್ನಿ ಅವಘಡ ಸಂಭವಿಸಿದ್ದನ್ನು ಪೊಲೀಸರು ನೆನಪಿಸಿದ್ದಾರೆ. ಮೂರು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಸಂಭವಿಸಿದ್ದ ಬೆಂಕಿಯಲ್ಲಿ ಸುಮಾರು 50 ಗುಡಿಸಲುಗಳು ಭಸ್ಮವಾಗಿದ್ದವು, ನಂತರ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು.
ಈ ಬಾರಿ ಮತ್ತೆ ಅದೇ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿರುವುದರಿಂದ ಭದ್ರತೆ ಮತ್ತು ಕಸದ ನಿರ್ವಹಣೆಯ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.
ಈ ಕುರಿತು ಬೇಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬೆಂಕಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ಆರಂಭಿಸಿದ್ದಾರೆ.
