ಬೆಂಗಳೂರು: ಅಕ್ರಮ ವಾಹನ ಮಾಡಿಫಿಕೇಶನ್ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಕೃತ್ಯಗಳ ವಿರುದ್ಧ ಕಠಿಣ ಸಂದೇಶ ನೀಡಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು, ಬೆಂಕಿ ಉಗುಳುವಂತೆ ಮಾಡಿಫೈಡ್ ಸೈಲೆನ್ಸರ್ ಅಳವಡಿಸಿದ್ದ ಕಾರನ್ನು ಸೀಜ್ ಮಾಡಿ, ವಿದ್ಯಾರ್ಥಿಯೊಬ್ಬರಿಗೆ ₹1.11 ಲಕ್ಷ ದಾಖಲೆ ದಂಡ ವಿಧಿಸಿದ್ದಾರೆ.
ಜನವರಿಯ ಮೊದಲ ವಾರದಲ್ಲಿ ಹೆನ್ನೂರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಾರಿನ ಎಕ್ಸ್ಹಾಸ್ಟ್ನಿಂದ ಬೆಂಕಿ ಚಿಮ್ಮುತ್ತಾ, ಅತಿಯಾದ ಶಬ್ದ ಉಂಟಾಗುತ್ತಿದ್ದುದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಯಿತು. ಘಟನೆಯನ್ನು ಕಂಡ ಸ್ಥಳೀಯರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿತ್ತು.

ವೈರಲ್ ವಿಡಿಯೋ ಆಧರಿಸಿ ಕಾರ್ಯಾಚರಣೆ ನಡೆಸಿದ ಹೆನ್ನೂರು ಟ್ರಾಫಿಕ್ ಪೊಲೀಸ್ ಸಿಬ್ಬಂದಿ, ವಾಹನವನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡರು. ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯ ಉಂಟುಮಾಡಿದ್ದ ಹಿನ್ನೆಲೆಯಲ್ಲಿ ಕಾರನ್ನು ಸೀಜ್ ಮಾಡಿ, ಮುಂದಿನ ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿ (RTO)ಗೆ ಮಾಹಿತಿ ನೀಡಲಾಯಿತು.
RTO ಅಧಿಕಾರಿಗಳು ವಾಹನವನ್ನು ಪರಿಶೀಲಿಸಿ, ಮೋಟಾರ್ ವಾಹನ ಕಾಯ್ದೆಗೆ ವಿರುದ್ಧವಾಗಿರುವ ಅಪಾಯಕಾರಿ ಮತ್ತು ಅಕ್ರಮ ಮಾಡಿಫಿಕೇಶನ್ಗಳು ನಡೆದಿರುವುದನ್ನು ದೃಢಪಡಿಸಿದರು. ಇದರಿಂದಾಗಿ ವಿದ್ಯಾರ್ಥಿಗೆ ಗರಿಷ್ಠ ಪ್ರಮಾಣದ ದಂಡವಾದ ₹1,11,500 ವಿಧಿಸಲಾಯಿತು.
ಕೇರಳ ಮೂಲದ ವಿದ್ಯಾರ್ಥಿ ದಂಡವನ್ನು ಸಂಪೂರ್ಣವಾಗಿ ಪಾವತಿಸಿದ ಬಳಿಕ, ನಿಯಮಾನುಸಾರ ವಾಹನವನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಅಕ್ರಮ ಮಾಡಿಫಿಕೇಶನ್, ಶಬ್ದ ಮಾಲಿನ್ಯ ಮತ್ತು ಸ್ಟಂಟ್ಗಳಿಗೆ ಮುಂದಿನ ದಿನಗಳಲ್ಲಿ ಇನ್ನೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
