ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಕರ್ನಾಟಕ ರಾಜ್ಯದ LPG ಪೂರೈಕೆ, ರಸಗೊಬ್ಬರ ಲಭ್ಯತೆ ಹಾಗೂ ಕಾನೂನು ಸುವ್ಯವಸ್ಥೆಯ ಕುರಿತು ವಿವರವಾದ ಮಾಹಿತಿ ನೀಡಿದರು.
ರಾಜ್ಯದಲ್ಲಿ LPG ಪೂರೈಕೆ ರಾಷ್ಟ್ರೀಯ ಪರಿಸ್ಥಿತಿಯಂತೆ ಸ್ವಲ್ಪ ಪ್ರಮಾಣದಲ್ಲಿ ತೊಂದರೆಯನ್ನು ಎದುರಿಸುತ್ತಿದ್ದರೂ, ಸುಮಾರು 3.11 ಲಕ್ಷ ಗೃಹ ಬಳಕೆದಾರರಿಗೆ ಪೂರೈಕೆ ನಿರಂತರವಾಗಿ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು. ಆದರೆ ವಾಣಿಜ್ಯ LPG ಪೂರೈಕೆಯಲ್ಲಿ ಹೆಚ್ಚು ಪರಿಣಾಮ ಕಂಡುಬಂದಿದೆ.
ದಿನಸಿ ಸುಮಾರು 44,700 ಸಿಲಿಂಡರ್ ಅವಶ್ಯಕತೆ ಇದ್ದು, ಮಾರ್ಚ್ 16ರಿಂದ ಕೇವಲ 20% (ಸುಮಾರು 7,000 ಸಿಲಿಂಡರ್) ಪೂರೈಕೆ ನಡೆದಿದ್ದು, ಮಾರ್ಚ್ 23ರಿಂದ 40% (16,000 ಸಿಲಿಂಡರ್) ಗೆ ಹೆಚ್ಚಿಸಲಾಗಿದೆ. ಮಾರ್ಚ್ 27ರಿಂದ ಇದನ್ನು 60% ಮಟ್ಟಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪೂರೈಕೆ ವ್ಯವಸ್ಥೆಯಲ್ಲಿ ಆದ್ಯತೆಯ ಕ್ರಮವನ್ನು ಅನುಸರಿಸಲಾಗುತ್ತಿದೆ. ಆಸ್ಪತ್ರೆಗಳು, ಹಾಸ್ಟೆಲ್ಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮೊದಲ ಆದ್ಯತೆ, ನಂತರ ಸರ್ಕಾರಿ ಹಾಗೂ ಸಾರಿಗೆ ಇಲಾಖೆಯ ಕ್ಯಾಂಟೀನ್ಗಳು, ನಂತರ ಹೋಟೆಲ್ಗಳು, ಇಂಡಿರಾ ಕ್ಯಾಂಟೀನ್ಗಳು ಮತ್ತು ಹಾಲು ಉತ್ಪಾದನಾ ಘಟಕಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಕೃಷಿ, ಔಷಧ, ಕೋಳಿ ಸಾಕಾಣಿಕೆ ಕ್ಷೇತ್ರಗಳಿಗೆ ನಂತರ ಆದ್ಯತೆ ನೀಡಲಾಗಿದೆ.
ಪೂರೈಕೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಇದುವರೆಗೆ 27 ಎಫ್ಐಆರ್ಗಳು ದಾಖಲಾಗಿದ್ದು, 1,169 ಪ್ರಕರಣಗಳು ದಾಖಲಾಗಿ, 1,603 ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಮ್ಯಾಂಡ್ ನಿಯಂತ್ರಣಕ್ಕಾಗಿ ತಾತ್ಕಾಲಿಕವಾಗಿ ವಾಣಿಜ್ಯ ಸಿಲಿಂಡರ್ ಬುಕ್ಕಿಂಗ್ಗೆ ನಿರ್ಬಂಧ ಹೇರಲಾಗಿದೆ. ಹೋಟೆಲ್ಗಳು ಮತ್ತು ಕೈಗಾರಿಕೆಗಳಿಗೆ ವಿದ್ಯುತ್ ಅಡಿಗೆ, ಸೋಲಾರ್ ಹಾಗೂ PNG ಬಳಕೆಗೆ ಸಲಹೆ ನೀಡಲಾಗಿದೆ. ಆರಂಭದಲ್ಲಿ ಕಂಡುಬಂದ ಆತಂಕದಿಂದ ಬುಕ್ಕಿಂಗ್ ಹೆಚ್ಚಳ ಈಗ ನಿಯಂತ್ರಣದಲ್ಲಿದೆ ಎಂದು ಸಚಿವರು ಹೇಳಿದರು.
ದೀರ್ಘಕಾಲಿಕ ಪರಿಹಾರವಾಗಿ PNG ಮತ್ತು ಸಿಟಿ ಗ್ಯಾಸ್ ವಿತರಣೆ ವಿಸ್ತರಣೆಗೆ ಒತ್ತು ನೀಡಲಾಗಿದ್ದು, ಈಗಾಗಲೇ 5.5 ಲಕ್ಷಕ್ಕೂ ಹೆಚ್ಚು PNG ಸಂಪರ್ಕಗಳನ್ನು ನೀಡಲಾಗಿದೆ. 485 CNG ಸ್ಟೇಷನ್ಗಳು ಕಾರ್ಯನಿರ್ವಹಿಸುತ್ತಿದ್ದು, 18 ಪ್ರದೇಶಗಳಲ್ಲಿ CGD ಕಾಮಗಾರಿ ನಡೆಯುತ್ತಿದೆ.
ರಸಗೊಬ್ಬರ ವಿಷಯದಲ್ಲಿ ರಾಜ್ಯದಲ್ಲಿ ಸಾಕಷ್ಟು ಸಂಗ್ರಹವಿದ್ದು, ಯಾವುದೇ ದೊಡ್ಡ ಮಟ್ಟದ ಕೊರತೆ ಇಲ್ಲ. ಕಪ್ಪು ಮಾರುಕಟ್ಟೆ ಹಾಗೂ ಸಂಗ್ರಹಣೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪೂರೈಕೆ ತೊಂದರೆ ಹಿನ್ನೆಲೆಯಲ್ಲಿ ಕೆಲವು ಸ್ಥಳಗಳಲ್ಲಿ ಸಣ್ಣ ಮಟ್ಟದ ಅಹಿತಕರ ಘಟನೆಗಳು ನಡೆದಿದ್ದರೂ, ಪರಿಸ್ಥಿತಿ ಈಗ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ LPG ಹಂಚಿಕೆಯನ್ನು ಹೆಚ್ಚಿಸುವುದು, ಸರಕು ಸಾಗಣೆ ಸುಗಮಗೊಳಿಸುವುದು, ವಾಣಿಜ್ಯ ಸಿಲಿಂಡರ್ಗಳಿಗೆ ಹೆಚ್ಚುವರಿ ಕೋಟಾ ನೀಡುವುದು, GAIL ಮೂಲಕ PNG ವಿಸ್ತರಣೆ ವೇಗಗೊಳಿಸುವುದು ಹಾಗೂ ಕೃಷಿ ಹಂಗಾಮಿಗಾಗಿ ರಸಗೊಬ್ಬರ ಪೂರೈಕೆ ನಿರಂತರವಾಗಿರಲು ಸಹಕಾರ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.
ರಾಜ್ಯ ಸರ್ಕಾರವು ಆದ್ಯತೆ ಆಧಾರಿತ ಪೂರೈಕೆ, ಕಟ್ಟುನಿಟ್ಟಿನ ನಿಯಂತ್ರಣ ಹಾಗೂ ದೀರ್ಘಕಾಲಿಕ ಸುಧಾರಣೆಗಳ ಮೂಲಕ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು, ಕೇಂದ್ರದ ಸಹಕಾರದಿಂದ ಶೀಘ್ರದಲ್ಲೇ ಪರಿಸ್ಥಿತಿ ಸಾಮಾನ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಾಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
