ಬೆಂಗಳೂರು: ಸ್ಥಳೀಯ ನಿವಾಸಿಗಳ ಸಂಘಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ನಿರಂತರವಾಗಿ ಬಂದ ದೂರುಗಳ ಹಿನ್ನೆಲೆಯಲ್ಲಿ, ಪಾದಚಾರಿಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜು ರಸ್ತೆಯಲ್ಲಿ ಬೃಹತ್ ಅತಿಕ್ರಮಣ ತೆರವು ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಯಿತು.
ಸುಮಾರು 1.1 ಕಿಲೋಮೀಟರ್ ವ್ಯಾಪ್ತಿಯ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರ ಓಡಾಟಕ್ಕೆ ತೀವ್ರ ಅಡಚಣೆಯಾಗುತ್ತಿದ್ದ 7 ಸಣ್ಣ ಅಂಗಡಿಗಳು ಹಾಗೂ 5 ತಳ್ಳುವ ಗಾಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ಈ ಪ್ರದೇಶದಲ್ಲಿ ಪಾದಚಾರಿಗಳು ರಸ್ತೆ ಮೇಲೆಯೇ ನಡೆದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಿತ್ತು.
ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ಸುಗಮತೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಾರ್ಯಾಚರಣೆಯ ವಿವರ
ಈ ಕಾರ್ಯಾಚರಣೆ ಬಿಟಿಎಂ ಲೇಔಟ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ಗಳ ನೇತೃತ್ವದಲ್ಲಿ ನಡೆಯಿತು.
ಒಟ್ಟು 8 ಟ್ರ್ಯಾಕ್ಟರ್ಗಳು, ಅಗತ್ಯ ಯಂತ್ರೋಪಕರಣಗಳು ಮತ್ತು 40 ಕಾರ್ಮಿಕರನ್ನು ಬಳಸಲಾಯಿತು.
ಭದ್ರತೆಯ ದೃಷ್ಟಿಯಿಂದ 5 ಪೊಲೀಸ್ ಸಿಬ್ಬಂದಿ ಹಾಗೂ 2 ಮಾರ್ಷಲ್ಗಳನ್ನು ನಿಯೋಜಿಸಲಾಗಿತ್ತು.
ಪಾದಚಾರಿ ಮಾರ್ಗಗಳ ಅತಿಕ್ರಮಣ ಕಾನೂನುಬಾಹೀರವಾಗಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ಎಚ್ಚರಿಸಿದರು.
