ಬೆಂಗಳೂರು:
ನಾನು ಹಿಟ್ ಅಂಡ್ ರನ್ ಮಾಡುವ ವ್ಯಕ್ತಿ ಅಲ್ಲ. ನಡೆದಿರುವುದನ್ನು ನಾನು ಹೇಳಿದ್ದೇನೆ. ಮಿಸ್ಟರ್ ಸಿದ್ದರಾಮಯ್ಯ ನಿಮ್ಮಂತೆ ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ನಾನು ಹಿಟ್ ಅಂಡ್ ರನ್ನಾ? ಯಾವುದರಲ್ಲಿ ಹಿಟ್ ಅಂಡ್ ರನ್? ತೋರಿಸಿ ನೋಡೋಣ. ಸುಮ್ಮನೆ ನನ್ನನ್ನು ಕೆಣಕಬೇಡಿ. ಹಿಟ್ ಅಂಡ್ ರನ್ ಮಾಡ್ತಾ ಇರೋದು ನೀವು. ಬಿಜೆಪಿ ಸರಕಾರದ ಮೇಲೆ 40% ಆರೋಪ ಮಾಡಿದಿರಿ. ಆ ಆರೋಪಗಳ ಕಥೆ ಏನಾಯಿತು? ಒಂದು ದಾಖಲೆಯನ್ನಾದರೂ ಹೊರಗೆ ಬಿಟ್ರಾ? ನಿಮ್ಮ ಯೋಗ್ಯತೆ ನನಗೆ ಗೊತ್ತಿಲ್ಲವೆ? ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.
ಜೆಡಿಎಸ್ ಪಕ್ಷಕ್ಕೂ ದಾರಿದ್ರ್ಯ ಬಂದಿಲ್ಲ:
ಜೆಡಿಎಸ್ ಜೊತೆ ಹೋಗುವ ದಾರಿದ್ರ್ಯ ಬಂದಿಲ್ಲ ಎಂದು ಬಿಜೆಪಿಯ ಮಾಜಿ ಸಚಿವರೊಬ್ಬರು ನೀಡಿರುವ ಹೇಳಿಕೆಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ನಮಗೂ ಬಿಜೆಪಿ ಜತೆ ಹೋಗುವ ದಾರಿದ್ಯ್ರ ಬಂದಿಲ್ಲ. ನಾನು ಕಾರ್ಯಕರ್ತರಿಗೆ ಹೇಳುತ್ತೆನೆ, ಸದನದಲ್ಲಿ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಿದ್ದೇನೆ. ಅಲ್ಲಿ ಬಿಜೆಪಿ ಅಧಿಕೃತ ವಿರೋಧ ಪಕ್ಷ, ಕೆಲವೊಮ್ಮೆ ಅವರ ಜತೆ ಸೇರಿ ಹೋರಾಟ ಮಾಡಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಯಾರ ಬಳಿಗೂ ಭಿಕ್ಷೆ ಬೇಡುವ ಪರಿಸ್ಥಿತಿ ಇಲ್ಲ. ನಾನು ಯಾರ ಮನೆಯ ಬಾಗಿಲಿಗೂ ಹೋಗಲ್ಲ. ನಮ್ಮ ರಾಜ್ಯಕ್ಕೆ ಕಾಂಗ್ರೆಸ್ ಎಷ್ಟು ದ್ರೋಹ ಮಾಡಿದೆಯೋ ಅಷ್ಟೇ ದ್ರೋಹವನ್ನು ಬಿಜೆಪಿ ಕೂಡ ಮಾಡಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.