ಬೆಂಗಳೂರು:
2ನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ವಿಧಾನಸಭೆ ಪ್ರತಿಪಕ್ಷಗಳ ನಾಯಕನ ಸ್ಥಾನ ಅಲಂಕರಿಸುವುದು ಸ್ಪಷ್ವವಾಗಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿಯ ದೈತ್ಯ ನಾಯಕರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಆರ್ ಅಶೋಕ್, ಮಾಜಿ ಸಚಿವ ಸುನೀಲ್ ಕುಮಾರ್ ಹಾಗೂ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಪಕ್ಷ ನಾಯಕ ಸ್ಥಾನದ ರೇಸ್ನಲ್ಲಿ ಮುಂದೆ ಇದ್ದಾರೆ.
ಈ ನಡುವಲ್ಲೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ವಿಪಕ್ಷ ನಾಯಕ ಸ್ಥಾನ ಸೇರಿದಂತೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಈಗಾಗಲೇ ಬಿಜೆಪಿಯ ರಾಷ್ಟ್ರೀಯ ನಾಯಕರು ಬಿಜೆಪಿ ಶಾಸಕರ ಜೊತೆ ಅನೌಪಚಾರಿಕ ಸಭೆ ನಡೆಸಿ ಅಭಿಪ್ರಾಯವನ್ನು ಕಲೆಹಾಕುತ್ತಿದ್ದಾರೆ. ಆದರೆ, ಅಂತಿಮ ನಿರ್ಧಾರವನ್ನು ಜುಲೈನಲ್ಲಿ ನಡೆಯುವ ಬಜೆಟ್ ಅಧಿವೇಶನಕ್ಕೂ ಮುನ್ನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. ಆದರೆ, ವಿಪಕ್ಷ ನಾಯಕರ ಸ್ಥಾನಕ್ಕೆ ಪೈಪೋಟಿ ಹೆಚ್ಚಿರುವುದು ಬಿಜೆಪಿ ವರಿಷ್ಠರ ತಲೆನೋವಿಗೆ ಕಾರಣವಾಗಿದೆ.
ವಿಪಕ್ಷ ನಾಯಕನ ಸ್ಥಾನ ನಿರ್ಣಾಯಕ ಆಗಿರುವುದರಿಂದ ಬಿಜೆಪಿ ಅಳೆದು ತೂಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ. ಎಕೆಂದರೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಹಾಗೂ ತಪ್ಪು ಹೆಜ್ಜೆಗಳನ್ನು ಜನರ ಮುಂದಿಟ್ಟು ಪ್ರತಿಯೊಂದು ಸಿಕ್ಕ ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ವಿಪಕ್ಷ ನಾಯಕನ ಸ್ಥಾನ ಬಿಜೆಪಿಗೆ ಪ್ರಮುಖವಾಗಿದೆ.
ವಿಪಕ್ಷ ದಾಳಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ನಲ್ಲಿ ಹಲವು ಹಿರಿಯ ಶಾಸಕರಿರುವ ಕಾರಣಕ್ಕಾಗಿ ಬಿಜೆಪಿಯಲ್ಲಿಯೂ ಅಂತಹದ್ದೇ ನಾಯಕನನ್ನು ಆಯ್ಕೆ ಮಾಡಲು ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.