ದೆಹಲಿ : ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ನಡುವೆ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಮದನ್ ಬಿ. ಲೋಕುರ್, ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಎ.ಪಿ. ಶಾಹ್ ಹಾಗೂ ಹಿರಿಯ ಪತ್ರಕರ್ತ ಎನ್. ರಾಮ್ ಅವರು ಹಾಲಿ ಲೋಕಸಭೆ ಚುನಾವಣೆ ಕುರಿತು ಬಹಿರಂಗ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದಾರೆ.
ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಈ ಮೂವರು, ‘‘ದೇಶದಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಭಾರತದ ನಾಗರಿಕರಾಗಿ ನಾವು ನಿಮಗೆ ಈ ಪತ್ರ ಬರೆಯುತ್ತಿದ್ದೇವೆ. ನಾವು ನಂಬುವ ಪಕ್ಷಪಾತ ರಹಿತ ಹಾಗೂ ಪ್ರತಿಯೊಬ್ಬ ನಾಗರಿಕನ ಹಿತದೃಷ್ಟಿಯ ಪ್ರಸ್ತಾವದೊಂದಿಗೆ ನಾವು ನಿಮ್ಮನ್ನು ಸಂಪರ್ಕಿಸಿದ್ದೇವೆ’’ ಎಂದಿದ್ದಾರೆ.
ನಾವು ಎರಡೂ ಕಡೆಯಿಂದ ಆರೋಪಗಳು ಹಾಗೂ ಸವಾಲುಗಳನ್ನು ಮಾತ್ರ ಕೇಳಿದ್ದೇವೆ. ಯಾವುದೇ ಅರ್ಥಪೂರ್ಣ ಪ್ರತಿಕ್ರಿಯೆಯನ್ನು ಕೇಳಿಲ್ಲ. ನಮಗೆ ತಿಳಿದಿರುವಂತೆ ಇಂದಿನ ಡಿಜಿಟಲ್ ಜಗತ್ತು ತಪ್ಪು ಮಾಹಿತಿ, ತಪ್ಪು ನಿರೂಪಣೆಯ ಪ್ರವೃತ್ತಿಯನ್ನು ಒಳಗೊಂಡಿದೆ. ಈ ಸಂದರ್ಭ ಚರ್ಚೆಯ ಎಲ್ಲಾ ಆಯಾಮಗಳ ಕುರಿತು ಸಾರ್ವಜನಿಕರಿಗೆ ಉತ್ತಮ ಅರಿವು ಮೂಡಿಸುವುದು ಮುಖ್ಯ. ಆದ್ದರಿಂದ ಅವರು ತಿಳುವಳಿಕೆಯೊಂದಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.