
ಮೈಸೂರು: ಸೂರಿನ ಹೃದಯಭಾಗದ ರಾಮಾನುಜ ರಸ್ತೆಯಲ್ಲಿ ಆಟೋದಲ್ಲಿ ಸಾಗುತ್ತಿದ್ದ ನಾಲ್ವರು ವ್ಯಕ್ತಿಗಳ ಮೇಲೆ ಮಾರಕಾಸ್ತ್ರಗಳಿಂದ ನಡೆದ ದಾಳಿಯ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಕ್ರೂರ ಘಟನೆ ನಡೆದಿದೆ.
ಹಲ್ಲೆಗೊಳಗಾದವರು ರಾಜನ್ (38), ಅವರ ಪತ್ನಿ ಕುಮುದ, ವಿಶಾಲಾಕ್ಷಿ ಮತ್ತು ರೇಣುಕಮ್ಮ ಎಂಬವರಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣವೇ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ರಾಜನ್ ಮೇಲೆ ಒಂದು ವರ್ಷದ ಹಿಂದೆ ಪಾಕ್ಸೋ ಪ್ರಕರಣವೊಂದು ದಾಖಲಾಗಿತ್ತು. ಗುರುವಾರ ಅವರು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿದ ನಂತರ ಆಟೋದಲ್ಲಿ ಮನೆಗೆ ಹಿಂದಿರುಗುವಾಗ, ಹಿಂಬದಿಯಿಂದ ಕಾರಿನಲ್ಲಿ ಬಂದ ರಾಮ್, ಸೌಮ್ಯಾ, ಅಬ್ಬಯ್ಯ ಹಾಗೂ ಪ್ರಸಾದ್ ಎಂಬ ನಾಲ್ವರು ತಂಡ, ಮಚ್ಚು ಮತ್ತು ಲಾಂಗ್ ಉಪಯೋಗಿಸಿ ಮಾರಣಾಂತಿಕ ಹಲ್ಲೆ ನಡೆಸಿದರು ಎಂಬ ಆರೋಪ ಕೇಳಿ ಬಂದಿದೆ.

ದಾಳಿಯು ಸಾರ್ವಜನಿಕ ರಸ್ತೆಯಲ್ಲೇ ನಡೆದಿದ್ದು, ದಾಳಿಕಾರರು ಮಾರಕಾಸ್ತ್ರಗಳನ್ನು ಹಿಡಿದು ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಹಲ್ಲೆಯ ನಂತರ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ಸಂಬಂಧ ಕೆಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹ ನಡೆಸುತ್ತಿದ್ದಾರೆ. ಈ ಹಲ್ಲೆಯ ಹಿಂದೆ ಪಾಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಪ್ರತೀಕಾರ ಕಾರಣವೇ ಎನ್ನುವ ಬಗ್ಗೆ ತನಿಖೆ ಮುಂದುವರಿಸಲಾಗಿದೆ.
ಸಿಸಿಟಿವಿ ದೃಶ್ಯಗಳು ಮತ್ತು ಸ್ಥಳದ ಸಾಕ್ಷ್ಯಾಧಾರಗಳನ್ನು ಆಧರಿಸಿ ಆರೋಪಿಗಳ ಪತ್ತೆ ಕಾರ್ಯಕ್ಕೆ ಬೃಹತ್ ಜಾಲ ಹಬ್ಬಲಾಗಿದೆ.