ಸಿಎಂ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಜೊತೆ ಸಭೆ ನಡೆಸಿದ ಫಾಕ್ಸ್ ಕಾನ್ ಕಂಪನಿ ನಿಯೋಗ
ಬೆಂಗಳೂರು:
ದೇವನಹಳ್ಳಿಯ ಐಟಿಐಆರ್ ವಲಯದಲ್ಲಿ ಫಾಕ್ಸ್ ಕಾನ್ ಕಂಪನಿಯು ಸ್ಥಾಪಿಸಲು ಉದ್ದೇಶಿಸಿರುವ ಐಫೋನ್ ತಯಾರಿಕಾ ಘಟಕಕ್ಕೆ ಪೂರಕವಾಗಿ ತುಮಕೂರಿನಲ್ಲಿ ಮತ್ತೊಂದು ಘಟಕ ಸ್ಥಾಪಿಸುವ ಪ್ರಸ್ತಾವನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಂಪನಿಯ ಸಿಇಓ ಬ್ರ್ಯಾಂಡ್ ಚೆಂಗ್ ನೇತೃತ್ವದ ಎಫ್ಐಐ ನಿಯೋಗದ ಜೊತೆ ಉನ್ನತ ಮಟ್ಟದ ಸಭೆ ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಅನುಕೂಲವಾಗುವಂತಹ ಉತ್ತಮ ಪರಿಸರ ಇದೆ. ಶೈಕ್ಷಣಿಕ ಹಾಗೂ ಉದ್ಯಮ ವಲಯದ ನಡುವೆ ನಿರಂತರ ಸಂಪರ್ಕ ಮತ್ತು ಸಮನ್ವಯತೆ ಇದೆ. ಜೊತೆಗೆ ಕೌಶಲ್ಯಯುಕ್ತ ಸಿಬ್ಬಂದಿಯೂ ಲಭ್ಯವಿದ್ದಾರೆ ಎಂದು ವಿವರಿಸಿದರು.
ಫಾಕ್ಸ್ ಕಾನ್ ಸಂಸ್ಥೆಯು ತನ್ನ ಉದ್ಯಮ ಸ್ಥಾಪಿಸಲು ರಾಜ್ಯ ಸರ್ಕಾರವು ಎಲ್ಲ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
Karnataka Welcomes #Foxconn Industrial Internet (#FII) Company's Mega Investment, Boosting Tech Sector and Job Opportunities!
— M B Patil (@MBPatil) July 17, 2023
✅ Rs. 8,800 Cr of investement
✅ 14,000+ job opportunities
Participated in a productive discussion with #FII CEO Sri #BrandCheng & his Team, held… pic.twitter.com/PC4DCRJyMR
ಫಾಕ್ಸ್ ಕಾನ್ ಕಂಪನಿಯ ಅಂಗಸಂಸ್ಥೆ ಫಾಕ್ಸ್ ಕಾನ್ ಇಂಡಸ್ಟ್ರಿಯಲ್ ಇಂಟರ್ನೆಟ್ (ಎಫ್ಐಟಿ) ಇದಕ್ಕಾಗಿ 8,800 ಕೋಟಿ ರೂ. ಹೂಡಿಕೆ ಮಾಡುವ ಯೋಜನೆ ಹೊಂದಿದೆ. ಇದು 14,000 ಉದ್ಯೋಗ ಸೃಷ್ಟಿಸಲಿದ್ದು ಘಟಕ ಸ್ಥಾಪನೆಗೆ 100 ಎಕರೆ ಜಾಗ ಬೇಕಾಗುತ್ತದೆ. ತುಮಕೂರಿನ ಜಪಾನ್ ಇಂಡಸ್ಟ್ರಿಯಲ್ ಟೌನ್ ಷಿಪ್ ನಲ್ಲಿ ನಿಯೋಗದ ಸದಸ್ಯರು ಇಂದೇ ಲಭ್ಯ ಭೂಮಿಯನ್ನು ವೀಕ್ಷಿಸಲಿದ್ದಾರೆ.
ಫೋನ್ ಪರದೆ, ಹೊರ ಕವಚ ಹಾಗೂ ಇತರ ಯಾಂತ್ರೀಕೃತ ಬಿಡಿಭಾಗಗಳನ್ನು ಎಫ್ಐಐ ಘಟಕ ತಯಾರಿಸಲಿದೆ. ದೇವನಹಳ್ಳಿ ಬಳಿಯ ಉದ್ದೇಶಿತ ಐಫೋನ್ ತಯಾರಿಕಾ ಘಟಕವು ‘ಎಂಡ್ ಅಸೆಂಬ್ಲಿ’ ಘಟಕವಾಗಿದ್ದರೆ, ಎಫ್ ಐಐ ಘಟಕವು ಅದಕ್ಕೆ ಪೂರಕ ಘಟಕವಾಗಿರಲಿದೆ.
ಈ ಸಂದರ್ಭದಲ್ಲಿ ಭಾರಿ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಫಾಕ್ಸ್ ಕಾನ್ ಕಂಪನಿಯು ಸೆಮಿ ಕಂಡಕ್ಟರ್ ಸೇರಿದಂತೆ ಬೇರೆ ಯಾವುದೇ ಉದ್ದಿಮೆಯನ್ನು ಸ್ಥಾಪಿಸಲು ಬಯಸಿದರೆ ಅಗತ್ಯ ಎಲ್ಲಾ ನೆರವನ್ನೂ ಒದಗಿಸುವ ಭರವಸೆ ನೀಡಿದರು.
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಎಫ್ಐಐ ಪ್ರಧಾನ ವ್ಯವಸ್ಥಾಪಕರುಗಳಾದ ಮೈಕೇಲ್ ಲಿಂಗ್, ಜೇಸನ್ ಲಾವು, ಆಂಜಿ ಲಿನ್, ನಿರ್ದೇಶಕ ರಾದ ಸೆಂಥಿಲ್ ಕುಮಾರ, ಭರತ್ ದಂಡಿ ಮತ್ತಿತರರು ಇದ್ದರು.
ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ಇತರರು ಇದ್ದರು.