ನವದೆಹಲಿ: ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಮತದಾರರಿಗೆ ಉಚಿತ ಕೊಡುಗೆಗಳನ್ನು ವಿತರಿಸಲು ಯೋಜಿಸುತ್ತಿದ್ದಾರೆ ಮತ್ತು ಈ ಬಗ್ಗೆ ತ್ವರಿತ ಕ್ರಮವನ್ನು ಕೈಗೊಳ್ಳಲು ರಾಜ್ಯದ ಚುನಾವಣಾ ಯಂತ್ರವು ವಿಫಲಗೊಂಡಿದೆ ಎಂದು ಆರೋಪಿಸಿ ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಸಲ್ಲಿಸಿರುವ ದೂರಿನ ಕುರಿತು ತಕ್ಷಣವೇ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಚುನಾವಣಾ ಆಯೋಗವು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ಆದೇಶಿಸಿದೆ.
ಈ ಕುರಿತು ಮಾ.21ರಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಆಯೋಗವು, ಮಾದರಿ ನೀತಿ ಸಂಹಿತೆ ಮತ್ತು ಸಂಬಂಧಿತ ಕಾನೂನುಗಳ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮವನ್ನು ಕೈಗೊಳ್ಳುವಂತೆ ಮತ್ತು ಸಾಧ್ಯವಾದಷ್ಟು ಶೀಘ್ರ ಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ಬೆಂಗಳೂರು (ಗ್ರಾಮೀಣ) ಲೋಕಸಭಾ ಕ್ಷೇತ್ರದಲ್ಲಿ ‘ಭ್ರಷ್ಟ ಚಟುವಟಿಕೆಗಳನ್ನು’ ತಡೆಯಲು ಕ್ಷಿಪ್ರ ಕ್ರಮವನ್ನು ಕೈಗೊಳ್ಳುವಲ್ಲಿ ರಾಜ್ಯ ಚುನಾವಣಾ ಯಂತ್ರವು ವಿಫಲಗೊಂಡಿದೆ.
ಸಂಬಂಧಿತ ಅಧಿಕಾರಿಗಳಿಂದ ಕರ್ತವ್ಯಲೋಪ ಮಾತ್ರವಲ್ಲ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೋದರರಾಗಿರುವ ಹಾಲಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕ್ರಮ ಕೈಗೊಳ್ಳಲೂ ಅಧಿಕಾರಿಗಳು ಹೆದರುತ್ತಿದ್ದಾರೆ ಎಂದು ತನ್ನ ದೂರಿನಲ್ಲಿ ದೇವೇಗೌಡರು ಆರೋಪಿಸಿದ್ದಾರೆ.