ಬೆಂಗಳೂರು, ಮಾರ್ಚ್ 24 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ ಜೊತೆಗೆ ‘ಮರ್ಯಾದೆ’ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಕಾನೂನು ಕ್ರಮಕ್ಕೆ ಮುಂದಾಗಿದೆ. ವಿವಾಹದಲ್ಲಿ ವ್ಯಕ್ತಿಯ ಆಯ್ಕೆಯ ಸ್ವಾತಂತ್ರ್ಯವನ್ನು ರಕ್ಷಿಸುವ ಜೊತೆಗೆ ಅಂತರ್ಜಾತಿ ಹಾಗೂ ಅಂತರ್ಧರ್ಮೀಯ ವಿವಾಹಗಳಿಗೆ ವಿರೋಧವಾಗಿ ನಡೆಯುವ ಅಪರಾಧಗಳನ್ನು ತಡೆಯುವ ಉದ್ದೇಶದಿಂದ “ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ ವಿಧೇಯಕ–2026” ಅನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿ ಅಂಗೀಕರಿಸಲಾಗಿದೆ.
ಈ ವಿಧೇಯಕವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ H. K. Patil ಅವರು ಮಂಡಿಸಿ, ಇದರ ಅಗತ್ಯತೆ ಮತ್ತು ಉದ್ದೇಶಗಳನ್ನು ವಿವರಿಸಿದರು. ರಾಜ್ಯದಲ್ಲಿ ಜಾತಿ ಆಧಾರಿತ ತಾರತಮ್ಯ ಮತ್ತು ಅಂತರ್ಜಾತಿ ವಿವಾಹಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರಗಳು ಇನ್ನೂ ಮುಂದುವರಿಯುತ್ತಿರುವುದು, ವಿಶೇಷವಾಗಿ ಯುವಜನತೆ ತಮ್ಮ ಸಾಂವಿಧಾನಿಕ ಹಕ್ಕಿನಂತೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಾಗ ಎದುರಿಸಬೇಕಾಗುತ್ತಿರುವ ಬೆದರಿಕೆ, ಹಲ್ಲೆ ಹಾಗೂ ಕೊಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕಾನೂನು ಅಗತ್ಯವಾಯಿತು ಎಂದು ಅವರು ಸ್ಪಷ್ಟಪಡಿಸಿದರು.
ಇದುವರೆಗೆ ಇರುವ ಕಾನೂನುಗಳು ಕೊಲೆ, ಹಲ್ಲೆ ಮತ್ತು ಬೆದರಿಕೆ ಪ್ರಕರಣಗಳನ್ನು ಶಿಕ್ಷಾರ್ಹವಾಗಿಸಿದರೂ, ‘ಮರ್ಯಾದೆ’ ಹೆಸರಿನಲ್ಲಿ ನಡೆಯುವ ಸಾಮಾಜಿಕ ಬಹಿಷ್ಕಾರ, ಆಸ್ತಿ ಹಕ್ಕು ನಿರಾಕರಣೆ, ಮಾನಸಿಕ ಹಿಂಸೆ ಮತ್ತು ಗುಪ್ತ ದೌರ್ಜನ್ಯಗಳಂತಹ ವಿಚಾರಗಳನ್ನು ಸಮಗ್ರವಾಗಿ ಎದುರಿಸಲು ಸಾಕಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಸರ್ಕಾರ ಗಮನಿಸಿದೆ. ಈ ಹಿನ್ನೆಲೆಯಲ್ಲಿ, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ವಿಶೇಷ ಕಾನೂನು ತರಬೇಕೆಂಬ ನಿರ್ಧಾರ ಕೈಗೊಳ್ಳಲಾಗಿದೆ.
ವಿಧೇಯಕದ ಪ್ರಕಾರ, ಪರಸ್ಪರ ಒಪ್ಪಿಗೆಯಿಂದ ಮದುವೆಯಾಗುವ ವಯಸ್ಕರಿಗೆ ಯಾವುದೇ ತೃತೀಯ ವ್ಯಕ್ತಿಯ ಹಸ್ತಕ್ಷೇಪ ಕಾನೂನುಬಾಹಿರವಾಗಿದ್ದು, ಪೋಷಕರ ಅಥವಾ ಸಮಾಜದ ಅನುಮತಿ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ‘ಮರ್ಯಾದೆ’ ಹೆಸರಿನಲ್ಲಿ ನಡೆಯುವ ಹತ್ಯೆಗಳಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಗಂಭೀರ ಹಲ್ಲೆ ಅಥವಾ ದೈಹಿಕ ಹಿಂಸೆಗೆ 3 ರಿಂದ 5 ವರ್ಷಗಳವರೆಗೆ ಶಿಕ್ಷೆ ಹಾಗೂ ದಂಡ ವಿಧಿಸುವುದಾಗಿ ಕಾನೂನು ನಿರ್ಧರಿಸಿದೆ.
ಈ ಕಾಯ್ದೆಯಡಿ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ದೂರು ನೀಡಿದ 6 ಗಂಟೆಗಳ ಒಳಗಾಗಿ ಪೊಲೀಸ್ ರಕ್ಷಣೆ ಒದಗಿಸುವುದು ಕಡ್ಡಾಯವಾಗಿದ್ದು, ಜಿಲ್ಲಾ ಮಟ್ಟದಲ್ಲಿ ‘ಇವ ನಮ್ಮವ’ ವೇದಿಕೆಗಳನ್ನು ರಚಿಸಿ ಕಾನೂನು ನೆರವು, ಕೌನ್ಸಿಲಿಂಗ್ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಜೊತೆಗೆ, 24/7 ಸಹಾಯವಾಣಿ ವ್ಯವಸ್ಥೆ, ಸರ್ಕಾರಿ ವೆಚ್ಚದಲ್ಲಿ ಸೇಫ್ ಹೌಸ್ ವ್ಯವಸ್ಥೆ ಹಾಗೂ ತ್ವರಿತಗತಿ ನ್ಯಾಯಾಲಯಗಳ ಮೂಲಕ 6 ತಿಂಗಳೊಳಗೆ ಪ್ರಕರಣಗಳ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಕೂಡ ಈ ಕಾಯ್ದೆ ಒಳಗೊಂಡಿದೆ.
ಸಾಮಾಜಿಕ ಬಹಿಷ್ಕಾರಕ್ಕೂ ಈ ಕಾಯ್ದೆಯಲ್ಲಿ ಕಠಿಣ ನಿಷೇಧ ವಿಧಿಸಲಾಗಿದ್ದು, ಯಾವುದೇ ಸಮುದಾಯ ಅಥವಾ ಗುಂಪು ‘ಮರ್ಯಾದೆ’ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡರೆ, ಅದನ್ನು ಅಪರಾಧಕ್ಕೆ ಪ್ರಚೋದನೆ ಎಂದು ಪರಿಗಣಿಸಲಾಗುತ್ತದೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಈ ಕಾಯ್ದೆಯ ಜಾರಿಗೆ ಹೊಣೆಗಾರರಾಗಿದ್ದು, ಅಂತರ್ಜಾತಿ ಹಾಗೂ ಅಂತರ್ಧರ್ಮೀಯ ದಂಪತಿಗಳ ರಕ್ಷಣೆಗೆ ವಿಶೇಷ ಘಟಕಗಳನ್ನು ರಚಿಸುವುದು ಕಡ್ಡಾಯವಾಗಿದೆ.
ಈ ವಿಧೇಯಕವನ್ನು ಕುರಿತು ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್ ಅವರು, “ಇದು ಕೇವಲ ಕಾನೂನವಲ್ಲ, ಇದು ಸಾಮಾಜಿಕ ಕ್ರಾಂತಿ. ಯುವಜನತೆಯ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವುದು ಮತ್ತು ‘ಮರ್ಯಾದೆ’ ಹೆಸರಿನಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆಯುವುದು ಸರ್ಕಾರದ ಪ್ರಮುಖ ಗುರಿ” ಎಂದು ಹೇಳಿದರು. ಸುಮಾರು ಐದು ಗಂಟೆಗಳ ಕಾಲ ಸದನದಲ್ಲಿ ಚರ್ಚೆಯಾದ ಈ ವಿಧೇಯಕಕ್ಕೆ ವಿವಿಧ ಪಕ್ಷಗಳ ಸದಸ್ಯರು ಸಹಮತ ವ್ಯಕ್ತಪಡಿಸಿದ್ದು, ಕಾನೂನಿನ ಕಟ್ಟುನಿಟ್ಟಿನ ಜಾರಿಗೆ ಒತ್ತಾಯಿಸಿದ್ದಾರೆ.
ಅಂತಿಮವಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ತಿನಲ್ಲಿ ವಿಧೇಯಕ ಅಂಗೀಕಾರಗೊಂಡಿದ್ದು, ಇದರೊಂದಿಗೆ ಕರ್ನಾಟಕ ರಾಜ್ಯವು ವಿವಾಹದ ಆಯ್ಕೆಯ ಸ್ವಾತಂತ್ರ್ಯವನ್ನು ಕಾನೂನುಬದ್ಧವಾಗಿ ಬಲಪಡಿಸುವ ಜೊತೆಗೆ ‘ಮರ್ಯಾದೆ’ ಹೆಸರಿನ ಅಪರಾಧಗಳ ವಿರುದ್ಧ ಕಠಿಣ ಸಂದೇಶವನ್ನು ರವಾನಿಸಿದೆ.
