ಬೆಂಗಳೂರು: ಪರಿಶಿಷ್ಟ ಜಾತಿಗಳ ಮೀಸಲಾತಿಯ ಸಂಬಂಧಿಸಿದ ಅನ್ಯಾಯವನ್ನು ಸರಿಪಡಿಸಲು ಸರಕಾರಕ್ಕೆ ಒಂದು ವಾರದ ಗಡುವು ನೀಡಲಾಗಿದೆ ಎಂದು ಮಾಜಿ ಶಾಸಕರಾದ ಪಿ. ರಾಜೀವ್ ಅವರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿ ಬಂಜಾರ, ಭೋವಿ, ಕೊರಚ, ಕೊರವ ಸಮುದಾಯಗಳಿಗೆ ಅನ್ಯಾಯವೆಸಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬೆಳಿಗ್ಗೆ ಫ್ರೀಡಂ ಪಾರ್ಕ್ ನಲ್ಲಿ “ಬೆಂಗಳೂರು ಚಲೋ” ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಿ. ರಾಜೀವ್ ಅವರು ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ‘ಇಂದಿನದು ಕೇವಲ ಟ್ರೈಲರ್ ಮಾತ್ರ; ಪಿಕ್ಚರ್ ಅಭಿ ಬಾಕಿ ಹೈ’ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Freedom Park protest Bengaluru: ಸಿಎಂ ಕುರ್ಚಿಯಲ್ಲಿ ಕುಳಿತು ನ್ಯಾಯ ಕೊಡುವುದು ಮುಖ್ಯ: ಬಿ.ವೈ.ವಿಜಯೇಂದ್ರ ಅಭಿಪ್ರಾಯ
ಅಧಿಕಾರಿಗಳು ತಮಗೆ ಮನವಿ ಕೊಡುವಂತೆ ಹೇಳಿದ್ದು ನಾವು ಅದಕ್ಕೆ ಒಪ್ಪಲಿಲ್ಲ; ಬಳಿಕ ಹಿರಿಯ ಅಧಿಕಾರಿಗಳನ್ನು ಕಳಿಸುವುದಾಗಿ ಹೇಳಿದ್ದರು. ಅದಕ್ಕೂ ಒಪ್ಪಲಿಲ್ಲ; ಹೋರಾಟವು ಉಗ್ರ ಸ್ವರೂಪ ಪಡೆದಾಗ ಮಾನ್ಯ ಸಚಿವರು ಬಂದು ನಮ್ಮ ಮನವಿ ಸ್ವೀಕರಿಸಿದ್ದಾರೆ ಎಂದು ವಿವರಿಸಿದರು.
ಈ ಸರಕಾರಕ್ಕೆ ಒಂದು ವಾರದ ಗಡುವು ಕೊಟ್ಟಿದ್ದೇವೆ. ಒಂದು ವಾರದ ಒಳಗೆ ಈ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಡಲು ಗಡುವು ಹಾಕಿದ್ದೇವೆ. ಒಂದು ವೇಳೆ ಒಂದು ವಾರದ ಒಳಗೆ ಇವರು ತೀರ್ಮಾನ ತೆಗೆದುಕೊಳ್ಳದೇ ಇದ್ದರೆ ಇನ್ನಷ್ಟು ತೀವ್ರ ರೀತಿಯ ಹೋರಾಟ ಮಾಡಲಿದ್ದೇವೆ ಎಂದರು.
ಒಂದು ವಾರ ಕಾಯೋಣ. ಈ ಸರಕಾರ ನಮ್ಮ ಪರವಾಗಿ ತೀರ್ಮಾನ ತೆಗೆದುಕೊಳ್ಳದೇ ಇದ್ದರೆ, ಎಲ್ಲ ಸ್ವಾಮೀಜಿಗಳು, ರಾಜಕೀಯ ಮುಖಂಡರು ಸೇರಿ ಮುಂದಿನ ಹೋರಾಟದ ಸ್ವರೂಪವನ್ನು ತೀರ್ಮಾನ ಮಾಡುತ್ತೇವೆ. ಅವತ್ತು ಮನೆಗೆ ಬಾಗಿಲಿಗೆ ಬೀಗ ಹಾಕಿ ಬರೋಣ ಎಂದು ಮನವಿ ಮಾಡಿದರು. ಬಸ್ಸುಗಳಲ್ಲಿ ಶಾಂತಿಯುತವಾಗಿ ಊರಿಗೆ ತೆರಳಲು ವಿನಂತಿಸಿದರು.