BWSSB ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್.
ಲಂಡನ್ / ಬೆಂಗಳೂರು: ಬೆಂಗಳೂರಿನ ನೀರು ನಿರ್ವಹಣಾ ವ್ಯವಸ್ಥೆಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಗೌರವ ದೊರೆತಿದೆ. ಸ್ಮಾರ್ಟ್ ವಾಟರ್ ವಲಯದ ಪ್ರಮುಖ ಜಾಗತಿಕ ಸಂಸ್ಥೆಯಾದ ‘ಸ್ಮಾರ್ಟ್ ವಾಟರ್ ನೆಟ್ವರ್ಕ್ಸ್ ಫೋರಮ್’ (SWAN) ತನ್ನ 5ನೇ ಹಿರಿಯ ಯುಟಿಲಿಟಿ ಸಲಹಾ ಸಮಿತಿ (Senior Utility Advisory Group – UAG)ಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರನ್ನು ಆಯ್ಕೆ ಮಾಡಿದೆ.
ಈ ಪ್ರತಿಷ್ಠಿತ ಸಮಿತಿಯಲ್ಲಿ ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಪೋರ್ಚುಗಲ್ ಮತ್ತು ಬ್ರೆಜಿಲ್ನ ಹಿರಿಯ ನೀರು ನಿರ್ವಹಣಾ ತಜ್ಞರು ಸದಸ್ಯರಾಗಿದ್ದಾರೆ. ಜಾಗತಿಕ ನೀರಿನ ಸವಾಲುಗಳು, ಪ್ರಾದೇಶಿಕ ಪ್ರವೃತ್ತಿಗಳು ಹಾಗೂ ಕಾರ್ಯತಂತ್ರದ ಸಂಶೋಧನಾ ಆದ್ಯತೆಗಳನ್ನು ಗುರುತಿಸುವಲ್ಲಿ ಈ ಸಮಿತಿ ಪ್ರಮುಖ ಪಾತ್ರವಹಿಸಲಿದೆ.
ಡಾ. ಮನೋಹರ್ ಅವರ ನೇತೃತ್ವದಲ್ಲಿ BWSSB ಜಲಮಂಡಳಿಯು ಕೃತಕ ಬುದ್ಧಿಮತ್ತೆ (AI) ಹಾಗೂ ದತ್ತಾಂಶ ಆಧಾರಿತ (data-driven) ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದು, ಬೆಂಗಳೂರನ್ನು ಸ್ಮಾರ್ಟ್ ನೀರು ನಿರ್ವಹಣೆಯ ಪ್ರಮುಖ ನಗರವಾಗಿ ರೂಪಿಸಿದೆ. ಈ ಪ್ರಯತ್ನಗಳ ಹಿನ್ನೆಲೆಯಲ್ಲಿ ಅವರಿಗೆ ಜಾಗತಿಕ ಮಟ್ಟದಲ್ಲಿ ಈ ಮಾನ್ಯತೆ ದೊರೆತಿದೆ.
ತಮ್ಮ ಆಯ್ಕೆಯ ಕುರಿತು ಪ್ರತಿಕ್ರಿಯಿಸಿದ ಡಾ. ಮನೋಹರ್, “ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯೇ ಬೆಂಗಳೂರು ಜಲಮಂಡಳಿಗೆ ಜಾಗತಿಕ ಗುರುತನ್ನು ತಂದಿದೆ. ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಗೆ ಅನುಗುಣವಾಗಿ ಜಲಮಂಡಳಿಯು ವಿಶ್ವದರ್ಜೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ನಮ್ಮ ತಾಂತ್ರಿಕ ತಂಡದ ಶ್ರಮವೇ ಈ ಸಾಧನೆಯ ಮೂಲ ಕಾರಣ” ಎಂದು ತಿಳಿಸಿದ್ದಾರೆ.
SWAN ಸಂಸ್ಥೆಯ 16ನೇ ವಾರ್ಷಿಕ ಸಮ್ಮೇಳನವು 2026ರ ಜೂನ್ 2ರಿಂದ 4ರವರೆಗೆ ಅಮೆರಿಕದ ಫ್ಲೋರಿಡಾ ರಾಜ್ಯದ ಟ್ಯಾಂಪಾದಲ್ಲಿ ನಡೆಯಲಿದೆ. “Adapting Your Digital Journey” ಎಂಬ ವಿಷಯದಡಿ ನಡೆಯಲಿರುವ ಈ ಸಮ್ಮೇಳನದಲ್ಲಿ UAG ಸದಸ್ಯರು ಕಾರ್ಯತಂತ್ರದ ಸಲಹೆಗಳನ್ನು ನೀಡಲಿದ್ದಾರೆ.
2010ರಲ್ಲಿ ಸ್ಥಾಪನೆಯಾದ SWAN ಸಂಸ್ಥೆ ಕುಡಿಯುವ ನೀರು, ತ್ಯಾಜ್ಯನೀರು ಹಾಗೂ ಮಳೆನೀರು ಜಾಲಗಳ ನಿರ್ವಹಣೆಯಲ್ಲಿ ಡೇಟಾ ಆಧಾರಿತ ಸ್ಮಾರ್ಟ್ ಪರಿಹಾರಗಳನ್ನು ಉತ್ತೇಜಿಸುವ ಜಾಗತಿಕ ಲಾಭರಹಿತ ಸಂಸ್ಥೆಯಾಗಿದೆ.
