ಬೆಂಗಳೂರು: ಕೋರಮಂಗಲದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಸ-ರಸ ಘಟಕದ ಮಾದರಿಯನ್ನೇ ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನವಿಡೀ ನಡೆಸಿದ ತಪಾಸಣೆಯ ಭಾಗವಾಗಿ ಆಯುಕ್ತರು ಕೋರಮಂಗಲದಲ್ಲಿನ ಕಸ-ರಸ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಘಟಕದಲ್ಲಿರುವ ಬಯೋಮೆಥನೈಸೇಷನ್ ಪ್ಲಾಂಟ್ನಲ್ಲಿ ಹಸಿ ಕಸದ ಸಂಸ್ಕರಣೆ, ಹಾಗೂ ಒಣ ಕಸ ಸಂಗ್ರಹಣಾ ಘಟಕದಲ್ಲಿ ಸಂಗ್ರಹಿಸಿರುವ ಹಳೆ ಬೆಡ್ಗಳು, ಚಪ್ಪಲಿಗಳು, ಕೆಟ್ಟುಹೋದ ಯಂತ್ರಗಳು, ಬಾಟಲಿಗಳು ಸೇರಿದಂತೆ ವಿವಿಧ ಒಣ ತ್ಯಾಜ್ಯಗಳ ವಿಲೇವಾರಿ ಪ್ರಕ್ರಿಯೆಗಳ ದಾಖಲೆಗಳನ್ನು ಪರಿಶೀಲಿಸಿದರು.
ಕಸ-ರಸ ಘಟಕದ ಹಸಿ ಹಾಗೂ ಒಣ ಕಸದ ವೈಜ್ಞಾನಿಕ ಸಂಸ್ಕರಣೆ ವಿಧಾನಕ್ಕೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೇ ಮಾದರಿಯನ್ನು ಮುಂದಿನ ದಿನಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.


ಈ ಸಂದರ್ಭದಲ್ಲಿ ಹುಳಿಮಾವು ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯ ಗುಣಮಟ್ಟವನ್ನೂ ಪರಿಶೀಲಿಸಿದ ಆಯುಕ್ತರು, ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಲೇನ್ ಮಾರ್ಕಿಂಗ್ ಮತ್ತು ಜೀಬ್ರಾ ಕ್ರಾಸಿಂಗ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಹುಳಿಮಾವು ಕೆರೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಕೆರೆಯ ಜಲಚರಗಳ ಹಿತದೃಷ್ಟಿಯಿಂದ ಕೆರೆ ನೀರು ಮತ್ತು ಮಳೆ ನೀರುಗಾಲುವೆಯಿಂದ ಹರಿದು ಬರುವ ತ್ಯಾಜ್ಯ ನೀರು ಮಿಶ್ರಣಗೊಳ್ಳದಂತೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸುವಂತೆ ಸೂಚಿಸಿದರು. ಕೆರೆ ಪ್ರದೇಶದಲ್ಲಿ ಒತ್ತುವರಿ ಉಂಟಾಗದಂತೆ ಸೂಕ್ತ ಫೆನ್ಸಿಂಗ್ ವ್ಯವಸ್ಥೆ ಮತ್ತು ತಡೆಗೋಡೆ ನಿರ್ಮಾಣಕ್ಕೂ ಅಗತ್ಯ ನಿರ್ದೇಶನಗಳನ್ನು ನೀಡಿದರು.
ಪರಿಶೀಲನಾ ಸಂದರ್ಭದಲ್ಲಿ ಮುಖ್ಯ ಅಭಿಯಂತರ ಕೆ.ವಿ. ರವಿ ಸೇರಿದಂತೆ ಕಾರ್ಯಪಾಲಕ ಅಭಿಯಂತರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
