ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆಯ ಆಧುನೀಕರಣ ಮತ್ತು ಗಾಂಧಿನಗರ ಪ್ರದೇಶದ ರಸ್ತೆ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಆದರೆ ಈ ಕಾರ್ಯಕ್ರಮವು ಕೇವಲ ಅಭಿವೃದ್ಧಿಯ ಮಾತಿಗಷ್ಟೇ ಸೀಮಿತವಾಗಿರದೆ, ಬಿಜೆಪಿ ಸಂಸದರು ಹಾಗೂ ಮೋದಿ ಸರ್ಕಾರದ ವಿರುದ್ಧದ ಕಿಡಿ ಪ್ರಹಾರದಿಂದ ಕೂಡಿತ್ತು — ರಾಜಕೀಯ ವಲಯದಲ್ಲಿ ಇದನ್ನು ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ಚುನಾವಣೆಗಾಗಿ ಕಾಂಗ್ರೆಸ್ ಅಭಿಯಾನದ ಪ್ರಾರಂಭವೆಂದು ಪರಿಗಣಿಸಲಾಗಿದೆ.
ವೇದಿಕೆಯಿಂದಲೇ ಸಿದ್ದರಾಮಯ್ಯ ಅವರು ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಕಠಿಣ ನಿರ್ದೇಶನ ನೀಡಿದರು:
“ಒಂದು ವಾರದೊಳಗೆ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಿ, ಒಂದು ಲೇಯರ್ ತಾರ್ ಹಾಕಬೇಕು,” ಎಂದು ಸೂಚನೆ ನೀಡಿದರು.

“ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ಜನಸಂಖ್ಯೆ ಹೆಚ್ಚುತ್ತಿದೆ. ಈ ಸವಾಲಿನ ನಡುವೆಯೂ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬೃಹತ್ ಮೊತ್ತದ ಹಣ ನೀಡುತ್ತಿದೆ,” ಎಂದು ಅವರು ಹೇಳಿದರು,
ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದ ಪಾತ್ರದ ಕುರಿತು ವ್ಯಂಗ್ಯವಾಡುತ್ತಾ,
“ಬೆಂಗಳೂರು ಮೆಟ್ರೋ ಯೋಜನೆಯ ಶೇಕಡಾ 87 ಹಣ ರಾಜ್ಯದ ಜನರಿಂದ ಬಂದಿದೆ. ಆದರೂ ಬಿಜೆಪಿ ಸರ್ಕಾರ ಅದನ್ನು ಕೇಂದ್ರದ ಯೋಜನೆ ಎಂದು ಸುಳ್ಳು ಹೇಳುತ್ತಿದೆ,” ಎಂದು ಟೀಕಿಸಿದರು.

ಮೋದಿ ಸರ್ಕಾರದ ವಿರುದ್ಧ ಕಿಡಿ:
“ಜಿಎಸ್ಟಿ ಜಾರಿಗೆ ಇಂದಿಗೆ 8 ವರ್ಷ. ಈ ಎಂಟು ವರ್ಷಗಳಲ್ಲಿ ಮೋದಿ ಸರ್ಕಾರ ಭಾರತೀಯರ ಹಣವನ್ನು ಸುಲಿದಿದೆ. ಈಗ ‘ದೀಪಾವಳಿ ಗಿಫ್ಟ್’ ಎಂದು ಜಾಹಿರಾತು ನೀಡಿ ಬೆನ್ನು ತಟ್ಟಿಕೊಳ್ಳುತ್ತಿರುವುದು ನಾಚಿಕೆಕರ. ಜಿಎಸ್ಟಿ ಬದಲಾವಣೆಗಳಿಂದ ರಾಜ್ಯಕ್ಕೆ ₹15,000 ಕೋಟಿ ನಷ್ಟವಾಗಿದೆ,” ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಮತ್ತು ಅಭಿವೃದ್ಧಿ ಕುರಿತು ಘೋಷಣೆ:
“ಬೆಂಗಳೂರು ಅಭಿವೃದ್ಧಿಗೆ ₹1.20 ಲಕ್ಷ ಕೋಟಿ ವೆಚ್ಚದಲ್ಲಿ ಯೋಜನೆ ಕೈಗೊಂಡಿದ್ದೇವೆ. ಆದರೆ ಕೇಂದ್ರ ಸರ್ಕಾರದಿಂದ ಒಂದು ಪೈಸೆಯೂ ಸಹಾಯ ಇಲ್ಲ,” ಎಂದು ಹೇಳಿದರು.
“ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಹೊಸ ರಸ್ತೆ ನಿರ್ಮಿಸಲಿಲ್ಲ, ಒಂದೇ ಒಂದು ರಸ್ತೆ ಗುಂಡಿ ಮುಚ್ಚಲಿಲ್ಲ. ಇಂದು ಇರುವ ರಸ್ತೆಗಳೆಲ್ಲಾ ಕಾಂಗ್ರೆಸ್ ಸರ್ಕಾರದ ಕಾಲದವು,” ಎಂದು ವ್ಯಂಗ್ಯವಾಡಿದರು.
ರಾಜಕೀಯ ಕಿಡಿ — ‘ಅಮಾವಾಸೆ ಸೂರ್ಯ’ ವ್ಯಂಗ್ಯ:
“ನೀವು ಮೋದಿ, ಮೋದಿ ಅಂತ ಕೂಗ್ತೀರ. ಆದರೆ ನಿಮ್ಮ ಸಂಸದ ಪಿ.ಸಿ. ಮೋಹನ್ ಪಾರ್ಲಿಮೆಂಟ್ನಲ್ಲಿ ಬಾಯಿ ಬಿಟ್ಟಿದ್ರಾ? ಸಂಸದ ತೇಜಸ್ವಿ ಸೂರ್ಯ — ಇವರನ್ನು ನಾನು ‘ಅಮಾವಾಸೆ ಸೂರ್ಯ’ ಅಂತ ಕರೀತೀನಿ. ಇವತ್ತಿನವರೆಗೆ ರಾಜ್ಯದ ವಿರುದ್ಧದ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿದ್ರಾ? ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ ಅವರು ಮೋದಿ ಸರ್ಕಾರದ ವಿರುದ್ಧ ಒಂದು ದಿನವಾದರೂ ಮಾತನಾಡಿದ್ರಾ?” ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಈ ಕಿಡಿ ನುಡಿಗಳು ಕೇವಲ ಕಾರ್ಯಕ್ರಮದ ಭಾಗವಲ್ಲ, ಜಿಬಿಎ ಚುನಾವಣೆಗೆ ಕಾಂಗ್ರೆಸ್ ಆರಂಭಿಸಿದ ರಾಜಕೀಯ ಧ್ವನಿ ಎಂದಂತೆ ರಾಜಕೀಯ ವಲಯ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.
