ಬೆಂಗಳೂರು, ಫೆಬ್ರವರಿ 07: Greater Bengaluru Authority (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಂದ ತಲಾ ಒಂದು ವಾರ್ಡ್ನ್ನು ಆಯ್ಕೆ ಮಾಡಿ, ವಾರ್ಡ್ ಮಟ್ಟದ ಕ್ಲೈಮೇಟ್ ಆಕ್ಷನ್ ಪ್ಲಾನ್ಗಳನ್ನು ಸಿದ್ಧಪಡಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತರಾದ Maheshwar Rao ತಿಳಿಸಿದ್ದಾರೆ.
ಜಿಬಿಎ ಮುಖ್ಯ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಐದು ನಗರ ಪಾಲಿಕೆಗಳ ವಾರ್ಷಿಕ ಆಯವ್ಯಯ ಅಂದಾಜು ಪಟ್ಟಿಗಳೊಂದಿಗೆ ಹವಾಮಾನ ಕ್ರಿಯಾ ಯೋಜನೆಗಳ ಏಕೀಕರಣ ಕುರಿತು ಚರ್ಚೆ ನಡೆಸಲಾಗಿದೆ. ವಾರ್ಡ್ ಮಟ್ಟದ ಕ್ಲೈಮೇಟ್ ಆಕ್ಷನ್ ಪ್ಲಾನ್ಗಳ ಮೂಲಕ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಸಮಗ್ರವಾಗಿ ವಿಶ್ಲೇಷಿಸಿ, ಪರಿಣಾಮಕಾರಿ ಹಾಗೂ ನೆಲಮಟ್ಟದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಬಿಎಯ ಹವಾಮಾನ ಕ್ರಿಯಾ ಕೋಶದ ಅಡಿಯಲ್ಲಿ ಕಾರ್ಯನಿರ್ವಹಿಸುವ ವರ್ಕಿಂಗ್ ಗ್ರೂಪ್ಗಳ ಸಹಕಾರದೊಂದಿಗೆ, ಆಯ್ಕೆಯಾದ ಐದು ವಾರ್ಡ್ಗಳಲ್ಲಿ ಇಂಧನ ಮತ್ತು ಕಟ್ಟಡಗಳು, ಸಾರಿಗೆ, ಘನ ತ್ಯಾಜ್ಯ ನಿರ್ವಹಣೆ, ನಗರ ಯೋಜನೆ, ಹಸಿರೀಕರಣ ಮತ್ತು ಜೀವವೈವಿಧ್ಯ, ನೀರು ಮತ್ತು ಮಳೆನೀರು ನಿರ್ವಹಣೆ, ವಿಪತ್ತು ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಳವಾದ ವಿಶ್ಲೇಷಣೆ ನಡೆಸಿ ಕ್ಲೈಮೇಟ್ ಆಕ್ಷನ್ ಪ್ಲಾನ್ಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಆಯ್ಕೆಯಾದ ವಾರ್ಡ್ಗಳ ವಿವರ:
ಬೆಂಗಳೂರು ಕೇಂದ್ರ ನಗರ ಪಾಲಿಕೆ – ಶಾಂತಿನಗರ ವಾರ್ಡ್
ಬೆಂಗಳೂರು ಉತ್ತರ ನಗರ ಪಾಲಿಕೆ – ಜಕ್ಕೂರು ವಾರ್ಡ್
ಬೆಂಗಳೂರು ದಕ್ಷಿಣ ನಗರ ಪಾಲಿಕೆ – ಬೇಗೂರು ವಾರ್ಡ್
ಬೆಂಗಳೂರು ಪೂರ್ವ ನಗರ ಪಾಲಿಕೆ – ವಿಜಿನಾಪುರ ವಾರ್ಡ್
ಬೆಂಗಳೂರು ಪಶ್ಚಿಮ ನಗರ ಪಾಲಿಕೆ – ನಾಲ್ವಡಿ ಕೃಷ್ಣರಾಜ ಒಡೆಯರ್ ವಾರ್ಡ್
ಮುಂದಿನ ಹಂತದಲ್ಲಿ ಈ ಐದು ವಾರ್ಡ್ಗಳಲ್ಲಿ ರೂಪಿಸಲಾದ ಆಕ್ಷನ್ ಪ್ಲಾನ್ಗಳನ್ನು ಮಾದರಿಯಾಗಿ ತೆಗೆದುಕೊಂಡು, ಪ್ರತ್ಯೇಕ ವಿಶ್ಲೇಷಣೆಯೊಂದಿಗೆ ಉಳಿದ ಎಲ್ಲಾ ವಾರ್ಡ್ಗಳಿಗೂ ಕ್ಲೈಮೇಟ್ ಆಕ್ಷನ್ ಪ್ಲಾನ್ಗಳನ್ನು ಹಂತ ಹಂತವಾಗಿ ರೂಪಿಸಲಾಗುವುದು ಎಂದು ಮಹೇಶ್ವರ್ ರಾವ್ ಹೇಳಿದರು.
ಹವಾಮಾನ ಕ್ರಿಯಾ ಯೋಜನೆಗಳ ವೈಜ್ಞಾನಿಕ ವಿಶ್ಲೇಷಣೆ, ದತ್ತಾಂಶ ಆಧಾರಿತ ಯೋಜನಾ ರೂಪಣೆ, ತಾಂತ್ರಿಕ ಮಾರ್ಗದರ್ಶನ ಮತ್ತು ಕಾರ್ಯಾನುಷ್ಠಾನದ ಮೇಲ್ವಿಚಾರಣೆಗಾಗಿ ತಾಂತ್ರಿಕ ಕೋಶ (Technical Cell) ರಚಿಸಲು ಸೂಚನೆ ನೀಡಿದರು. ಇದೇ ವೇಳೆ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶದಿಂದ ಐಇಸಿ (IEC) ಸೆಲ್ ರಚಿಸಿ, ವಾರ್ಡ್ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲು ನಿರ್ದೇಶನ ನೀಡಿದರು.
ಹವಾಮಾನ ಕ್ರಿಯಾ ಯೋಜನೆಗಳ ಕುರಿತು ನಾಗರಿಕರಲ್ಲಿ ಆಸಕ್ತಿ ಮತ್ತು ಅರಿವು ಹೆಚ್ಚಿಸಲು, ವಿಷಯ ಪರಿಣಿತರೊಂದಿಗೆ ಕ್ಲೈಮೇಟ್ ಆಕ್ಷನ್ ಪಾಡ್ಕಾಸ್ಟ್ ಆರಂಭಿಸುವಂತೆ ಕೂಡ ಅವರು ಸೂಚಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಎಫ್ಇಸಿಸಿ ವಿಶೇಷ ಆಯುಕ್ತರಾದ ರಾಮಚಂದ್ರನ್ ಆರ್, ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ.ಎನ್. ರಮೇಶ್, ಅಭಿವೃದ್ಧಿ ಆಯುಕ್ತ ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ಬಸವರಾಜ ಕಬಾಡೆ, ಸ್ವಯಂಪ್ರಭಾ, ವಿಜಯ್ ಕುಮಾರ್ ಹರಿದಾಸ್, ಲೋಕೇಶ್, ಕೃಷ್ಣಮೂರ್ತಿ, ಕಾರ್ಯಪಾಲಕ ಅಭಿಯಂತರ ನಿತ್ಯಾ ಜೆ, ತೋಟಗಾರಿಕೆ ವಿಭಾಗದ ಅಧಿಕಾರಿಗಳು ಹಾಗೂ ಡಬ್ಲ್ಯೂಆರ್ಐ, ವೆಲ್ ಲ್ಯಾಬ್ಸ್, ಸೆನ್ಸಿಂಗ್ ಲೋಕಲ್, ಜನಸಾಹಸ್, ಸಾಕ್ರಟಸ್, ಹಸಿರುದಳ ಮತ್ತು ಸಿಎಸ್ಟಿಇಪಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
