ಬೆಂಗಳೂರು: ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ಶೈರ್ ಹೋಟೆಲ್ನಲ್ಲಿ ನಡೆದ ಜಿ20 (G20) ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರ ನಿಯೋಗ, ಕೇಂದ್ರೀಯ ಬ್ಯಾಂಕ್ಗಳ ಗವರ್ನರ್ಗಳ ನಿಯೋಗದ ಸಭೆಯಲ್ಲಿ ಭಾರತದ (India) ಅಧ್ಯಕ್ಷ ಸ್ಥಾನಕ್ಕೆ (G20 Presidency) ಮತ್ತು ಹಣಕಾಸು ಅಜೆಂಡಾಗಳಿಗೆ ಒಕ್ಕೊರಲ ಬೆಂಬಲ ವ್ಯಕ್ತವಾಯಿತು. ಸೋವಾರದಿಂದ ಮೂರು ದಿನಗಳ ಕಾಲ ನಡೆದ ಸಭೆಯಲ್ಲಿ ಜಾಗತಿಕ ಆರ್ಥಿಕ ಸವಾಲುಗಳು, ಕಂಡುಕೊಳ್ಳಬೇಕಾದ ಪರಿಹಾರದ ಬಗ್ಗೆ ಸಮಾಲೋಚನೆ ನಡೆಯಿತು. ಭಾರತವು ಜಿ20 ಅಧ್ಯಕ್ಷತೆ ವಹಿಸಿಕೊಂಡ ಬಳಿಕದ ನಡೆದ ಮೊದಲ ಸಭೆ ಇದಾಗಿದೆ. ಜಾಗತಿಕ ಆರ್ಥಿಕ ಸವಾಲುಗಳು, ಹಣದುಬ್ಬರ, ಆಹಾರ ಮತ್ತು ಇಂಧನ ಅಭದ್ರತೆ, ಸ್ಥೂಲ ಆರ್ಥಿಕತೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ನಿಯೋಗ ಚರ್ಚೆ ನಡೆಸಿತು. ಜತೆಗೆ, ಪರಿಹಾರ ಕಂಡುಕೊಳ್ಳಲು ಚೌಕಟ್ಟು ರೂಪಿಸುವ ಬಗ್ಗೆ ಚರ್ಚಿಸಲಾಯಿತು. ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ಗಳನ್ನು ಬಲಪಡಿಸುವುದು, ಜಾಗತಿಕ ಸಾಲದ ಒತ್ತಡವನ್ನು ಕಡಿಮೆ ಮಾಡುವುದು, ಬಂಡವಾಳ ಹರಿವು ಮತ್ತು ಜಾಗತಿಕ ಹಣಕಾಸು ಸುರಕ್ಷತೆಗೆ ಸಂಬಂಧಿಸಿ ನಿಯೋಗಗಳ ಸದಸ್ಯರು ವಿಚಾರ ಮಂಡನೆ ಮಾಡಿದರು ಎಂದು ‘ಜಿ20’ ಪ್ರಕಟಣೆ ತಿಳಿಸಿದೆ.
ಭವಿಷ್ಯದ ನಗರಗಳಿಗೆ ಹಣಕಾಸು ನೆರವು ನೀಡುವುದು, ಅವುಗಳನ್ನು ಅಂತರ್ಗತ, ಸ್ಥಿತಿಸ್ಥಾಪಕತ್ವ ಉಳ್ಳ ಮತ್ತು ಸಬಲ ನಗರಗಳನ್ನಾಗಿ ರೂಪಿಸಲು ಮೂಲಸೌಕರ್ಯ ಕಲ್ಪಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು. ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಸರ್ಕಾರಗಳು ಏನೇನು ಕ್ರಮಗಳನ್ನು ಕೈಗೊಳ್ಳಬೇಕು, ಹವಾಮಾನ ಬದಲಾವಣೆ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸುದೀರ್ಘ ಚರ್ಚೆಗಳು ನಡೆದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Bangalore G20 Meet: ಡಿ. 13 ರಿಂದ ಜಿ20 ಶೃಂಗಸಭೆ; ಡಾಂಬರು ಕಂಡ ಬೆಂಗಳೂರಿನ ಕೆಲ ರಸ್ತೆಗಳು
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆರಿಗೆ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವುದು, ತೆರಿಗೆ ವ್ಯವಸ್ಥೆಗೆ ಚೌಕಟ್ಟು ರೂಪಿಸುವುದು ಮತ್ತು ಎರಡು ಸ್ತರದ ತೆರಿಗೆ ನೀತಿ ರೂಪಿಸುವ ಬಗ್ಗೆ ಸದಸಗ್ಯ ರಾಷ್ಟ್ರಗಳ ನಿಯೋಗಗಳು ಒಮ್ಮತಕ್ಕೆ ಬಂದಿವೆ.
ಜಾಗತಿಕ ಆರೋಗ್ಯ ವ್ಯವಸ್ಥೆ ಬಲಪಡಿಸಲು ಒಮ್ಮತ
ಜಾಗತಿಕ ಮಟ್ಟದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು, ಹಣಕಾಸು ಹಾಗೂ ಆರೋಗ್ಯ ಸಚಿವಾಲಯಗಳ ನಡುವೆ ಹೆಚ್ಚಿನ ಸಮನ್ವಯ ಸಾಧಿಸುವಂತೆ ಮಾಡುವುದು ಮತ್ತು ಜಾಗತಿಕವಾಗಿ ಎಲ್ಲ ರಾಷ್ಟ್ರಗಳು ಸಾಂಕ್ರಾಮಿಕ ತಡೆ ಸಿದ್ಧತೆ ಮತ್ತು ಪ್ರತಿಕ್ರಿಯೆಗೆ ಸನ್ನದ್ಧವಾಗಿರುವಂತೆ ಮಾಡಲು ಪ್ರೋತ್ಸಾಹ ನೀಡುವ ಬಗ್ಗೆ ಸದಸ್ಯರು ಒಮ್ಮತಕ್ಕೆ ಬಂದಿದ್ದಾರೆ. ಕಡಿಮೆ ಆದಾಯವುಳ್ಳ ದೇಶಗಳಿಗೆ ಆರೋಗ್ಯ ವ್ಯವಸ್ಥೆ ಬಲಪಡಿಸುವುದಕ್ಕಾಗಿ ಹಣಕಾಸು ನೆರವು ನೀಡುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ‘ಜಿ20’ ಪ್ರಕಟಣೆ ಹೇಳಿದೆ.
ಇದನ್ನೂ ಓದಿ: ಜಿ20 ಲಾಂಛನದೊಂದಿಗೆ ವಿದ್ಯುದ್ದೀಪಾಲಂಕಾರದಿಂದ ಝಗಮಗಿಸಿದ ಹಂಪಿ
ಜಿ20 ಸದಸ್ಯ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ಗಳ ನಿಯೋಗಿಗಳು, ಹಣಕಾಸು ನಿಯೋಗಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಹಾಗೂ ಆರ್ಬಿಐ ಡೆಪ್ಯುಟಿ ಗವರ್ನರ್ ಡಾ. ಮೈಕೆಲ್ ಡಿ. ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ.
ಜಿ20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರ ನಿಯೋಗ, ಕೇಂದ್ರೀಯ ಬ್ಯಾಂಕ್ಗಳ ಗವರ್ನರ್ಗಳ ನಿಯೋಗದ ಮುಂದಿನ ಸಭೆ ಬೆಂಗಳೂರಿನಲ್ಲಿ ಫೆಬ್ರವರಿ 23ರಿಂದ 25ರ ವರೆಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ