ಬೆಂಗಳೂರು ಗ್ರಾಮಾಂತರ: ಪ್ರೇಮದ ಹೆಸರಲ್ಲಿ ವಿದ್ಯಾರ್ಥಿನಿಯ ನಂಬಿಕೆಯನ್ನು, ಖಾಸಗಿ ವೀಡಿಯೋ ಮೂಲಕ ಬ್ಲಾಕ್ಮೇಲ್ ಮಾಡಿ ಬಳಿಕ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿಯನ್ನು ವಿಕಾಸ್ ಎಂಬ ಯುವಕ ಪ್ರೇಮದ ನಾಟಕವಾಡಿ ತನ್ನ ಬಲೆಗೆ ಕೆಡವಿದ್ದ. ಕಳೆದ ಏಳು ತಿಂಗಳಿಂದ ಪರಿಚಯ ಬೆಳೆಸಿಕೊಂಡಿದ್ದ ಆತ, ಮೂರು ತಿಂಗಳ ಹಿಂದೆ ತನ್ನ ಸ್ನೇಹಿತ ಚೇತನ್ ಮನೆಗೆ ಯುವತಿಯನ್ನು ಕರೆಸಿಕೊಂಡಿದ್ದಾನೆ. ಅಲ್ಲಿ ವಿಕಾಸ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಆ ಖಾಸಗಿ ಕ್ಷಣಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾನೆ.
ನಂತರ ಅದೇ ವೀಡಿಯೋ ತೋರಿಸಿ ಯುವತಿಯನ್ನು ಬ್ಲಾಕ್ಮೇಲ್ ಮಾಡಿದ ವಿಕಾಸ್, “ನಾನು ಹೇಳಿದಾಗಲೆಲ್ಲ ಬರಬೇಕು” ಎಂದು ಬೆದರಿಕೆ ಹಾಕಿದ್ದಾನೆ. ಈ ಸಂದರ್ಭ ತನ್ನ ಸ್ನೇಹಿತರಾದ ಪ್ರಶಾಂತ್ ಮತ್ತು ಚೇತನ್ ಜೊತೆಗೂ ದೈಹಿಕ ಸಂಬಂಧಕ್ಕೆ ಒತ್ತಾಯಿಸಿ, ಮೂವರು ಸೇರಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿ ಪೀಡಿತ ಯುವತಿ ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಕಾಸ್, ಪ್ರಶಾಂತ್ ಮತ್ತು ಚೇತನ್ ಅವರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ವಿಕಾಸ್ ಮತ್ತು ಪ್ರಶಾಂತ್ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ಚೇತನ್ ಮಾಗಡಿ ಪಟ್ಟಣದಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದಾನೆ. ವಿವಾಹಿತನಾದ ಚೇತನ್, ಪತ್ನಿಯನ್ನು ತವರೂರಿಗೆ ಕಳುಹಿಸಿ ತನ್ನ ಮನೆಯನ್ನು ಈ ಅಪರಾಧಕ್ಕೆ ಬಳಸಿಕೊಂಡಿದ್ದಾನೆ ಎಂಬ ಆರೋಪವೂ ಇದೆ.
ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆಸಿದ್ದು, ವಿಕಾಸ್ ವಿರುದ್ಧ ಇತರೆ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳೂ ಪರಿಶೀಲನೆ ಹಂತದಲ್ಲಿವೆ. ಪ್ರೇಮದ ಹೆಸರಲ್ಲಿ ನಡೆದ ಈ ಅಮಾನುಷ ಕೃತ್ಯ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
