Home ಬೆಂಗಳೂರು ನಗರ ಬೆಂಗಳೂರಿನಲ್ಲಿ ಕಸ ವಿಲೇವಾರಿ ದೊಡ್ಡ ಮಾಫಿಯಾ, ಶಾಸಕರೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ: ಡಿಕೆ.ಶಿವಕುಮಾರ್ ಆರೋಪ

ಬೆಂಗಳೂರಿನಲ್ಲಿ ಕಸ ವಿಲೇವಾರಿ ದೊಡ್ಡ ಮಾಫಿಯಾ, ಶಾಸಕರೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ: ಡಿಕೆ.ಶಿವಕುಮಾರ್ ಆರೋಪ

6
0

ಬೆಂಗಳೂರು : ಬೆಂಗಳೂರಿನಲ್ಲಿ ಕಸ ವಿಲೇವಾರಿ ದೊಡ್ಡ ಮಾಫಿಯವಾಗಿದೆ. ಕಸದ ವಿಚಾರವಾಗಿ ಬೆಂಗಳೂರು ಶಾಸಕರುಗಳೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ನಾಗರಾಜ್ ಯಾದವ್ ಅವರು ಕಸ ವಿಲೇವಾರಿಗೆ ತಡೆಯಾಗಿರುವ ಬಗ್ಗೆ ಗಮನ ಸೆಳೆದರು. ಇದಕ್ಕೆ ಉತ್ತರ ನೀಡಿದ ಶಿವಕುಮಾರ್ ಅವರು, “ಈ ವಿಚಾರವಾಗಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇದೊಂದು ಮಾಫಿಯವಾಗಿದೆ. ಹಿಂದೆ 89 ಗುಂಪು ಮಾಡಿ ಟೆಂಡರ್ ಕರೆದಿದ್ದರು. ಈಗ ಅವರು ಒಟ್ಟಾಗಿ ನ್ಯಾಯಾಲಯದ ಮೆಟ್ಟಿಲೇರಿ ನಮಗೆ ಯಾವುದೇ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ. ನ್ಯಾಯಾಲಯ ಕೂಡ ಈ ವಿಚಾರವಾಗಿ ನಾವು ಏನು ಮಾಡಬೇಕು ಎಂಬ ತೀರ್ಪು ನೀಡುತ್ತಿಲ್ಲ. ನಾವು ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ 50 ಕಿ.ಮೀ ದೂರದ ಹೊರವಲಯದಲ್ಲಿ ಕಸ ವಿಲೇವಾರಿಗೆ ಪ್ರಯತ್ನ ಮಾಡುತ್ತಿದ್ದೇವೆ. ಬೆಂಗಳೂರಿನ ಕೆಲವು ಶಾಸಕರು ನಮಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ನಾನು ಅವರ ಹೆಸರು ಹೇಳಲು ಬಯಸುವುದಿಲ್ಲ. ನಾನು ಸತ್ಯಾಂಶವನ್ನೇ ಹೇಳುತ್ತಿದ್ದು, ಎಲ್ಲಾ ಪಕ್ಷದವರು ಇದ್ದಾರೆ. ಅಭಿವೃದ್ಧಿಗಾಗಿ ಅವರ ಕ್ಷೇತ್ರಕ್ಕೆ 800 ಕೋಟಿ ನೀಡಬೇಕು ಎಂದು ಕೇಳುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಮಹದೇವಪುರದಲ್ಲಿ ಕಸದ ಗಾಡಿಗಳು ನಿಂತಿವೆ. ಇಲ್ಲಿ ದೊಡ್ಡ ಸಮಸ್ಯೆ ಇದ್ದು, ಸೋಮವಾರ ವಿವರವಾದ ಉತ್ತರ ನೀಡುತ್ತೇನೆ. ಬೆಂಗಳೂರಿನಿಂದ ದೂರ ಈ ಕಸ ವಿಲೇವಾರಿ ಮಾಡಲು ನಾನು ಪ್ರಯತ್ನಿಸುತ್ತಿದ್ದು, ಇದಕ್ಕೆ ಎಲ್ಲಾ ಪಕ್ಷದವರು ಸಹಕಾರ ನೀಡಬೇಕು. ಬೆಂಗಳೂರಿನ ಹೊರವಲಯದಲ್ಲಿ 100 ಎಕರೆ ಜಾಗ ನೀಡಿದರೆ ಅದನ್ನು ಖರೀದಿ ಮಾಡಲು ಸಿದ್ಧವಿದ್ದೇವೆ. ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಪ್ರಯೋಗ ವಿಫಲವಾಗಿದೆ. ಹೀಗಾಗಿ ನಮ್ಮ ಮುಂದೆ ಅರುವ ಆಯ್ಕೆ ಅನಿಲ ಉತ್ಪಾದನೆ ಮಾತ್ರ. ಈ ವಿಚಾರದಲ್ಲಿ ಮೂರ್ನಾಲ್ಕು ಕಡೆಗಳಿಗೆ ಭೇಟಿ ನೀಡಿದ್ದು, ಇಂದೋರಿಗೂ ಭೇಟಿ ನೀಡಬೇಕಿದೆ. ನೈಸ್ ರಸ್ತೆ ಬಳಿ 100 ಎಕರೆ, ದೊಡ್ಡಬಳ್ಳಾಪುರದ ಬಳಿ ಜಮೀನು ಖರೀದಿ ಮಾಡಲಾಗುತ್ತಿದೆ. ಇನ್ನು ನಾನು ಕಸ ವಿಲೇವಾರಿ ವಿಚಾರವಾಗಿ ಟೆಂಡರ್ ಕರೆದಿಲ್ಲ. ಆದರೂ ಮಹಾನಾಯಕರೊಬ್ಬರು ಡಿ.ಕೆ. ಶಿವಕುಮಾರ್ ಈ ಯೋಜನೆಯಲ್ಲಿ 15 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ” ಎಂದು ತಿಳಿಸಿದರು.

ಸದಸ್ಯರಾದ ಟಿ.ಎನ್ ಜವರಾಯಿ ಗೌಡ ಅವರು ಬೆಂಗಳೂರಿನಲ್ಲಿ ಸ್ವಚ್ಛತಾಕರ್ಮಿಗಳ ಸಂಖ್ಯೆ ಕಡಿಮೆಯಾಗಿದ್ದು, ಪೌರಕಾರ್ಮಿಕರ ನೇಮಕಾತಿ ಅವ್ಯವಹಾರ ಬಗ್ಗೆ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಈ ವಿಚಾರವಾಗಿ ನಾನು ವಿವರವಾದ ಮಾಹಿತಿ ಪಡೆಯುತ್ತೇನೆ. ಒಟ್ಟು 5 ಸಾವಿರ ಹುದ್ದೆಯನ್ನು ವಿಶೇಷ ಅಭಿಯಾನದ ಮೂಲಕ 2 ವರ್ಷ ದಿನಗೂಲಿ ಕೆಲಸ ಮಾಡಬೇಕು ಎಂದು ನೇಮಕ ಮಾಡಿಕೊಳ್ಳಲಾಗಿದೆ. ಕನ್ನಡಬಾರದವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಇಲ್ಲಿ ಈ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು. ಈ ವಿಚಾರವಾಗಿ ನೀವು ನನ್ನ ಗಮನ ಸೆಳೆದಿದ್ದು ಸೋಮವಾರ ಅಥವಾ ಮಂಗಳವಾರ ಇನ್ನಷ್ಟು ವಿವರವಾದ ಉತ್ತರ ನೀಡುತ್ತೇನೆ” ಎಂದು ತಿಳಿಸಿದರು.

ಸದಸ್ಯರಾದ ಡಿ.ಟಿ ಶ್ರೀನಿವಾಸ್ ಅವರು ನಗರದಲ್ಲಿ ಸ್ಕೈವಾಕರ್ ಗಳ ನಿರ್ವಹಣೆಯಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಬೆಂಗಳೂರಿನಲ್ಲಿ ಎಷ್ಟು ಸ್ಕೈವಾಕ್ ಗಳಿವೆ, ಯಾವ ಮಟ್ಟದಲ್ಲಿ, ಮುಂದೆ ಈ ವಿಚಾರವಾಗಿ ನಮ್ಮ ನೀತಿಗಳೇನು ಎಂಬುದನ್ನು ಉತ್ತರದಲ್ಲಿ ನೀಡಬೇಕಿದ್ದು, ಈ ಪ್ರಶ್ನೆಗೆ ಸೋಮವಾರ ಉತ್ತರ ನೀಡುತ್ತೇವೆ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here