ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಸರವಜ್ಞನಗರ ವಿಭಾಗದ ವಾರ್ಡ್ 29ರಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಕಸ ಎಸೆಯುತ್ತಿದ್ದ ವಾಹನ ಒಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
KA-53-MK-5256 ಸಂಖ್ಯೆಯ ವಾಹನ ಕಸ ಸುರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಆಯುಕ್ತರಾದ ಪೊಮ್ಮಳ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ತಕ್ಷಣ ಕ್ರಮ ಕೈಗೊಳ್ಳಲಾಗಿದೆ.

ಕಿರಿಯ ಆರೋಗ್ಯ ನಿರೀಕ್ಷಕ (JHI) ಸಂದೀಪ್ ನೇತೃತ್ವದ ಬೆಂಗಳೂರು ಉತ್ತರ ನಗರ ಪಾಲಿಕೆ ತಂಡವು ಟ್ರಾಫಿಕ್ ಪೊಲೀಸರ ಸಹಕಾರದೊಂದಿಗೆ ವಾಹನವನ್ನು ಪತ್ತೆಹಚ್ಚಿ, ಕಲ್ಯಾಣ ನಗರದಲ್ಲಿರುವ ವಾಹನ ಮಾಲೀಕರ ವಿಳಾಸಕ್ಕೆ ತೆರಳಿ ತಪಾಸಣೆ ನಡೆಸಿತು. ನಂತರ ಘನ ಕಸದ ನಿರ್ವಹಣಾ ನಿಯಮ ಉಲ್ಲಂಘನೆಗಾಗಿ ₹5,000 ದಂಡವನ್ನು ವಿಧಿಸಲಾಯಿತು.
ಬೆಂಗಳೂರು ಉತ್ತರ ನಗರ ಪಾಲಿಕೆ, ನಗರದಲ್ಲಿ ಅಕ್ರಮವಾಗಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದು, ನಾಗರಿಕರು ಸ್ವಚ್ಛತೆ ಕಾಪಾಡುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದೆ.

“ಸ್ವಚ್ಛತೆ ಎಲ್ಲರ ಹೊಣೆ. ಅಕ್ರಮ ಕಸ ಸುರಿತಕ್ಕೆ ಯಾವುದೇ ಸಡಿಲಿಕೆ ಇರುವುದಿಲ್ಲ” ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
