ಬೆಂಗಳೂರು, ಮಾರ್ಚ್ 14: ನಗರದಲ್ಲಿ ಉಂಟಾಗುವ ವೆಟ್ ವೆಸ್ಟ್ (ತೇವ ಕಸ) ನಿಂದ ಇಂಧನ ಉತ್ಪಾದನೆ ಹೆಚ್ಚಿಸಲು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯಲ್ಲಿ ಇನ್ನಷ್ಟು ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದಲ್ಲಿರುವ ಕಸ-ರಸ (Waste-to-Energy) ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ನಗರದಲ್ಲಿ ತೇವ ಕಸದಿಂದ ಬಯೋಗ್ಯಾಸ್ ಉತ್ಪಾದನೆಗೆ ಸಮಗ್ರ ಅಧ್ಯಯನ ಕೈಗೊಳ್ಳಲಾಗುತ್ತದೆ. ನಗರ ಪಾಲಿಕೆಗಳಲ್ಲಿ ಡಿಸೆಂಟ್ರಲೈಜ್ಡ್ ಬಯೋಗ್ಯಾಸ್ ಕೇಂದ್ರಗಳನ್ನು ಸ್ಥಾಪಿಸಲು ಪ್ರತಿ ಪಾಲಿಕೆಯಲ್ಲಿ ಸುಮಾರು 2–3 ಎಕರೆ ಜಾಗ ಅಗತ್ಯವಿದೆ ಎಂದು ಅವರು ಹೇಳಿದರು.
ತಾತ್ಕಾಲಿಕವಾಗಿ ಈಗಿರುವ ಘಟಕಗಳನ್ನು ನವೀಕರಿಸಿ ಬಯೋಗ್ಯಾಸ್ ಉತ್ಪಾದನೆ ಹೆಚ್ಚಿಸುವ ಯೋಜನೆ ಇದೆ. ಉತ್ಪಾದನೆಯಾಗುವ ಗ್ಯಾಸ್ ಅನ್ನು ಸಮೀಪದ ಹೋಟೆಲ್ಗಳಿಗೆ ಪೂರೈಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ನಗರದಲ್ಲಿ ಕಸ ನಿರ್ವಹಣೆ ಪರಿಣಾಮಕಾರಿಯಾಗಲು ಒಣ ಕಸ ಮತ್ತು ತೇವ ಕಸವನ್ನು ಮೂಲದಲ್ಲೇ ಪ್ರತ್ಯೇಕಿಸುವುದು ಅತ್ಯಂತ ಅಗತ್ಯ ಎಂದು ಅವರು ಒತ್ತಿಹೇಳಿದರು. ಈ ನಿಟ್ಟಿನಲ್ಲಿ ನಾಗರಿಕರು ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪ್ರಸ್ತುತ ಕೋರಮಂಗಲದ ಕಸ-ರಸ ಘಟಕದಲ್ಲಿ ಸುಮಾರು 10 ಟನ್ ತೇವ ಕಸದಿಂದ ಬಯೋಗ್ಯಾಸ್ ಉತ್ಪಾದಿಸಲಾಗುತ್ತಿದೆ. ಇದನ್ನು ಸಮೀಪದ ಹೋಟೆಲ್ಗೆ ಪೂರೈಸಲಾಗುತ್ತಿದೆ. ಈ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಘಟಕದ ಮೇಲ್ಭಾಗದಲ್ಲಿ ಇರುವ ಹೈ ಟೆನ್ಷನ್ ವಿದ್ಯುತ್ ಲೈನ್ ಸ್ಥಳಾಂತರವಾದರೆ ದೊಡ್ಡ ಮಟ್ಟದಲ್ಲಿ ಬಯೋಗ್ಯಾಸ್ ಉತ್ಪಾದನೆ ಸಾಧ್ಯವಾಗುತ್ತದೆ ಎಂದು ತಿಳಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಬೆಂಗಳೂರು ಸಾಲಿಡ್ ವೆಸ್ಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ (BSWML) ಸಿಇಒ ಕರೀಗೌಡ ಮಾತನಾಡಿ, ತೇವ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವುದು ಘನ ಕಸ ನಿರ್ವಹಣೆಯ ಪ್ರಮುಖ ಭಾಗ ಎಂದು ಹೇಳಿದರು.
ಈಗಾಗಲೇ ಬಿಬಿಎಂಪಿ ನಿರ್ಮಿಸಿರುವ 12 ಬಯೋಗ್ಯಾಸ್ ಘಟಕಗಳಲ್ಲಿ 6 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ಘಟಕವೂ ದಿನಕ್ಕೆ ಸುಮಾರು 5 ಟನ್ ತೇವ ಕಸವನ್ನು ಸಂಸ್ಕರಿಸುತ್ತದೆ. ಒಟ್ಟು ಸುಮಾರು 30 ಟನ್ ತೇವ ಕಸದಿಂದ ಬಯೋಗ್ಯಾಸ್ ಉತ್ಪಾದನೆ ನಡೆಯುತ್ತಿದೆ. ಉಳಿದ 6 ಘಟಕಗಳನ್ನು ಪುನರುತ್ಥಾನಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಒಂದು ಟನ್ ತೇವ ಕಸದಿಂದ 30 ರಿಂದ 50 ಕೆಜಿ ಬಯೋಗ್ಯಾಸ್ ಉತ್ಪಾದಿಸಬಹುದು. ಇದರಿಂದ ಪ್ರತಿಯೊಂದು ಘಟಕದಲ್ಲಿ ಸುಮಾರು 200 ಕೆಜಿ ಗ್ಯಾಸ್ ಪ್ರತಿದಿನ ಉತ್ಪಾದನೆ ಸಾಧ್ಯವಾಗುತ್ತದೆ.
ಉತ್ಪಾದನೆಯಾಗುವ ಗ್ಯಾಸ್ ಘಟಕಗಳ ಒಳಾಂಗಣ ಬಳಕೆಗೆ ಬಳಸಲಾಗುತ್ತದೆ. ಉಳಿದ ಗ್ಯಾಸ್ನಿಂದ ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿಸಿ ಸಮೀಪದ ಉದ್ಯಾನವನಗಳಿಗೆ ಬೆಳಕು ಒದಗಿಸಲಾಗುತ್ತದೆ.
ಕೋರಮಂಗಲದ 8.5 ಟನ್ ಸಾಮರ್ಥ್ಯದ ಬಯೋಗ್ಯಾಸ್ ಘಟಕದಿಂದ ಪ್ರತಿದಿನ ಸುಮಾರು 120 ಕೆಜಿ ಗ್ಯಾಸ್ ಉತ್ಪಾದನೆಯಾಗಿ ಸಮೀಪದ ಹೋಟೆಲ್ಗೆ ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಕೆಜಿಗೆ ₹70 ದರದಲ್ಲಿ ದಿನಕ್ಕೆ ಸುಮಾರು ₹8,400 ಆದಾಯ ಲಭಿಸುತ್ತಿದೆ.
ಇದಕ್ಕೂ ಹೊರತಾಗಿ ನಾಲ್ಕು ಹೊಸ ಡಿಸೆಂಟ್ರಲೈಜ್ಡ್ ಬಯೋಮಿಥನೇಶನ್ ಘಟಕಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
- ವಾರ್ಡ್ 151 ಮತ್ತು ವಾರ್ಡ್ 27 ರಲ್ಲಿ ನಿರ್ಮಾಣ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ.
- ವಾರ್ಡ್ 196 ಮತ್ತು ವಾರ್ಡ್ 56 ರಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಇದರ ಜೊತೆಗೆ ಎರಡು ದೊಡ್ಡ ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ.
GAIL Gas India ಸಂಸ್ಥೆಯ ಸಹಕಾರದಿಂದ ದಿನಕ್ಕೆ ಸುಮಾರು 300 ಟನ್ ತೇವ ಕಸ ಸಂಸ್ಕರಿಸುವ ಘಟಕ ನಿರ್ಮಾಣ ಕಾರ್ಯ ಆರಂಭವಾಗಿದೆ.
ಹಾಗೂ ಕನ್ನಹಳ್ಳಿ ಪ್ರದೇಶದಲ್ಲಿ ದಿನಕ್ಕೆ ಸುಮಾರು 1,000 ಟನ್ ತೇವ ಕಸದಿಂದ ಬಯೋಗ್ಯಾಸ್ ಉತ್ಪಾದಿಸುವ ಘಟಕ ಸ್ಥಾಪಿಸಲು ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ.
ಹೀರೋಹಳ್ಳಿ ಪ್ರದೇಶದಲ್ಲಿ ದಿನಕ್ಕೆ 50 ಟನ್ ತೇವ ಕಸ ಸಂಸ್ಕರಿಸುವ ಘಟಕದಲ್ಲಿ ಸುಮಾರು 1,500 ಕೆಜಿ ಗ್ಯಾಸ್ ಉತ್ಪಾದನೆಯಾಗಿ Bio-CNG ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪೈಪ್ಲೈನ್ ಮೂಲಕ ಮನೆಗಳಿಗೆ ಗ್ಯಾಸ್ ಪೂರೈಸುವ ಯೋಜನೆಯೂ ರೂಪಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಸುಮಾರು 3,000 ಟನ್ ತೇವ ಕಸದಿಂದ ಬಯೋಗ್ಯಾಸ್ ಉತ್ಪಾದನೆ ಮಾಡುವ ಯೋಜನೆಯನ್ನು ಸಮಗ್ರ ಘನ ಕಸ ನಿರ್ವಹಣಾ ಟೆಂಡರ್ನಲ್ಲಿ ಸೇರಿಸಲಾಗಿದೆ.
ಈ ಕ್ರಮಗಳಿಂದ ತೇವ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಶಕ್ತಿ ಉತ್ಪಾದನೆ ಸಾಧ್ಯವಾಗುವುದರ ಜೊತೆಗೆ ಘಟಕಗಳಲ್ಲಿ ಉತ್ಪತ್ತಿಯಾಗುವ ದ್ರವ ಗೊಬ್ಬರವನ್ನು ರೈತರು ಬಳಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಮನೆಯ ಮಟ್ಟದಲ್ಲಿಯೂ ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸಬಹುದು.
- ಇಂತಹ ಘಟಕ ಸ್ಥಾಪನೆಗೆ ಸುಮಾರು ₹20,000 ವೆಚ್ಚವಾಗಬಹುದು.
- ಮನೆಯ ತೇವ ಕಸದಿಂದ ಉತ್ಪಾದನೆಯಾಗುವ ಗ್ಯಾಸ್ ಅನ್ನು ಅಡುಗೆ ಇಂಧನವಾಗಿ ಬಳಸಬಹುದು ಎಂದು ತಿಳಿಸಲಾಗಿದೆ.
ಕೋರಮಂಗಲದ ಕಸ-ರಸ ಕೇಂದ್ರದಲ್ಲಿ ಈಗಾಗಲೇ
- 8.5 ಟನ್ ಸಾಮರ್ಥ್ಯದ ಬಯೋಮಿಥನೇಶನ್ ಘಟಕ,
- ಡ್ರೈ ವೆಸ್ಟ್ ಕಲೆಕ್ಷನ್ ಸೆಂಟರ್ (DWCC),
- ಥರ್ಮಕೋಲ್ ಸಂಸ್ಕರಣ ಘಟಕ,
- ಬಲ್ಕ್ ವೆಸ್ಟ್ ಮ್ಯಾನೇಜ್ಮೆಂಟ್ ಕೇಂದ್ರ,
- ತರಬೇತಿ ಕೇಂದ್ರ
ಇತ್ಯಾದಿ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಪರಿಶೀಲನೆ ವೇಳೆ ಕೋರಮಂಗಲದ ಸೆಕೆಂಡರಿ ವೆಸ್ಟ್ ಟ್ರಾನ್ಸ್ಫರ್ ಸ್ಟೇಷನ್ಗೂ ಭೇಟಿ ನೀಡಿ, ಮಿಶ್ರ ಕಸ ಬರುತ್ತಿರುವುದನ್ನು ಗಮನಿಸಿದ ಮಹೇಶ್ವರ ರಾವ್, ಕಸವನ್ನು ಸರಿಯಾಗಿ ಪ್ರತ್ಯೇಕಿಸಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಮುಖ್ಯ ಅಭಿಯಂತರ ಬಸವರಾಜ ಕಬಾಡೆ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.
