ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ.
ಬೆಂಗಳೂರು, ಮಾರ್ಚ್ 12: ರಾಜ್ಯದಲ್ಲಿ ಉಂಟಾಗಿರುವ ಕಮರ್ಷಿಯಲ್ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯವು ಒಂದು ವಾರದೊಳಗೆ ಸರಿಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಗ್ಯಾಸ್ ಕೊರತೆ ಕುರಿತು ಸದಸ್ಯರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಅವರು, ಗೃಹಬಳಕೆ (ಡೊಮೆಸ್ಟಿಕ್) ಗ್ಯಾಸ್ ಸಿಲಿಂಡರ್ಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ ಹೋಟೆಲ್, ರೆಸ್ಟೋರೆಂಟ್ ಮತ್ತು ಇತರ ವಾಣಿಜ್ಯ ಸಂಸ್ಥೆಗಳು ಬಳಸುವ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಸಂಘರ್ಷ ಹಾಗೂ ಸಾಗಣೆ ಹಡಗುಗಳ ಸಂಚಾರದಲ್ಲಿ ಉಂಟಾದ ವ್ಯತ್ಯಯದಿಂದಾಗಿ ಗ್ಯಾಸ್ ಪೂರೈಕೆಯಲ್ಲಿ ವಿಳಂಬ ಉಂಟಾಗಿದೆ ಎಂದು ಸಚಿವರು ವಿವರಿಸಿದರು.
ಈಗಾಗಲೇ ಎರಡು ಗ್ಯಾಸ್ ಹಡಗುಗಳು ಬಂದಿದ್ದು, ಇನ್ನೂ 10 ರಿಂದ 12 ಹಡಗುಗಳು ಭಾರತಕ್ಕೆ ಬರಲಿವೆ, ಇದರಿಂದ ಮುಂದಿನ ಕೆಲವು ದಿನಗಳಲ್ಲಿ ಪೂರೈಕೆ ಸ್ಥಿತಿ ಸುಧಾರಣೆಯಾಗಲಿದೆ ಎಂದು ಹೇಳಿದರು.
ಈ ಕುರಿತು ಆಯಿಲ್ ಕಂಪನಿಗಳ ಅಧಿಕಾರಿಗಳು, ಇಲಾಖೆ ಕಾರ್ಯದರ್ಶಿ ಹಾಗೂ ಆಯುಕ್ತರೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಮುನಿಯಪ್ಪ ಹೇಳಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳು, ಹಾಸ್ಟೆಲ್ಗಳು, ವಸತಿ ಶಾಲೆಗಳು ಮತ್ತು ಅತಿ ಅವಶ್ಯಕ ಸಂಸ್ಥೆಗಳಿಗೆ ಕಮರ್ಷಿಯಲ್ ಗ್ಯಾಸ್ ಪೂರೈಕೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಹೋಟೆಲ್ ಉದ್ಯಮಿಗಳಿಗೆ ತಾತ್ಕಾಲಿಕವಾಗಿ ಎಲೆಕ್ಟ್ರಿಕ್ ಸ್ಟವ್ ಅಥವಾ ಪರ್ಯಾಯ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.
“ಹೋಟೆಲ್ಗಳು ಸ್ವಲ್ಪ ದಿನ ಸಹನೆ ತೋರಬೇಕು. ಸುಮಾರು ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಗ್ಯಾಸ್ ಪೂರೈಕೆ ಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗಲಿದೆ,” ಎಂದು ಸಚಿವರು ಭರವಸೆ ನೀಡಿದರು.
ರಾಜ್ಯ ಸರ್ಕಾರ ಆಯಿಲ್ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಗ್ಯಾಸ್ ಪೂರೈಕೆ ಸರಾಗವಾಗಲು ಕ್ರಮ ಕೈಗೊಳ್ಳುತ್ತಿದೆ, ಹಾಗೂ ಅವಶ್ಯಕ ಸೇವೆಗಳಿಗೂ ಯಾವುದೇ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
