ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಗಾರರುವಾಗಿ ಕಳೆದ ಏಳು ತಿಂಗಳಿನಿಂದ ಸೇವೆ ಸಲ್ಲಿಸುತ್ತಿರುವ ಗೌರವ್ ಗುಪ್ತಾ ರವರು ಇಂದು ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಗುಪ್ತಾ ರವರು ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ನನ್ನನ್ನು ಬಿಬಿಎಂಪಿಯ ಮುಖ್ಯ ಆಯುಕ್ತರನ್ನಾಗಿ ನೇಮಿಸಿ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದಾರೆ. ಪಾಲಿಕೆಗೆ ಬರುವ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಇರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮವಹಿಸಲಾಗುವುದು ಎಂದರು.
ಕಳೆದ 6-7 ತಿಂಗಳಲ್ಲಿ ನಗರದಲ್ಲಿರುವ ಸಮಸ್ಯೆಗಳನ್ನು ಹತ್ತಿರದಿಂದ ನೋಡಲಾಗಿದೆ. ನಗರದಲ್ಲಿ ಕೋವಿಡ್ ಸೋಂಕು ಕ್ರಮೇಣ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಣಕ್ಕೆ ತರಲು ಸೂಕ್ತ ಕ್ರಮತೆಗೆದುಕೊಳ್ಳುವ ಅವಶ್ಯಕತೆಯಿದೆ. ಎಲ್ಲರೂ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದು, ಸಭೆ/ಸಮಾರಂಭಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು. ಈ ಸಂಬಂಧ ಈಗಾಗಲೇ ಜಾತ್ರೆ, ಸಮಾರಂಭಗಳು ನಡೆಸುವುದನ್ನು ಸರ್ಕಾರ ಮಿತಿಗೊಳಿಸಿದೆ. ಮುಂದೆ ಇನ್ನೂ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿಯಂತ್ರಣಕ್ಕೆ ತರಲಾಗವುದು. ಪಾಲಿಕೆಯಲ್ಲಿರುವ ಕಾರ್ಯತಂತ್ರವನ್ನು ಈಗಾಗಲೇ ಸಕ್ರಿಯಗೊಳಿಸಲಾಗಿದ್ದು, ಎಲ್ಲರೂ ಕ್ರಿಯಾಶೀಲರಾಗಿದ್ದಾರೆ. ಆಡಳಿತವನ್ನು ಇನ್ನಷ್ಟು ಚುರುಕುಗೊಳಿಸಿ ಕಾರ್ಯನಿರ್ವಹಿಸಲಾಗುವುದು ಎಂದರು.
ಅಧಿಕಾರ ಹಸ್ತಾಂತರ ಮಾಡಿದ ಬಳಿಕ ನಿಕಟಪೂರ್ವ ಆಯುಕ್ತರಾದ ಎನ್.ಮಂಜುನಾಥ್ ಪ್ರಸಾದ್ ರವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಡಿಸೆಂಬರ್ ತಿಂಗಳಲ್ಲಿ 600 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಕಡಿಮೆಯಾಗಿದ್ದ ಕೋವಿಡ್ ಪ್ರಕರಣಗಳು ಮಾರ್ಚ್ ತಿಂಗಳಲ್ಲಿ ಕೇರಳ, ಮಹಾರಾಷ್ಟ್ರದಲ್ಲಿ ಎರಡನೇ ಅಲೆ ಪ್ರಾರಂಭ, ಅನೇಕ ಮದುವೆ ಸಮಾರಂಭಗಳು, ಪ್ರತಿಭಟನೆ, ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುವ ಕಾರಣ ಕೋವಿಡ್ ಪ್ರಣಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.
ನಗರದಲ್ಲಿ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಿ, ಐಸೋಲೇಟ್ ಮಾಡಿ ಕಾಂಟ್ಯಾಕ್ಟ್ ಟ್ರೇಸ್ ಮಾಡಲಾಗುತ್ತಿದೆ. ಇದರಿಂದ ಕೋವಿಡ್ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಲಿದೆ. ಕೋವಿಡ್ ಸೋಂಕು 20 ರಿಂದ 40 ವರ್ಷದೊಳಗಿರುವವರಿಗೆ ಪತ್ತೆಯಾಗುತ್ತಿದೆ. ಮರಣ ಪ್ರಮಾಣ ತೀರಾ ಕಡಿಮೆಯಿದ್ದು, 60 ವರ್ಷ ಮೇಲ್ಪಟ್ಟವರು ಮಾತ್ರ ಮೃತಪಡುತ್ತಿದ್ದಾರೆ ಎಂದರು.
ನಗರದಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ನಿನ್ನೆ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಕರಣ ಹೆಚ್ಚಾಗುತ್ತಿದ್ದು, ಮುಂದಿನ ಒಂದು ವಾರದಲ್ಲಿ ಶೇ. 10ರಷ್ಟು ಹಾಸಿಗೆ ಮೀಸಲಿಡಲು ಸೂಚಿಸಲಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕು ಹರಡುವಉನ್ನು ನೋಡಿಕೊಂಡು ಹಾಸಿಗೆ ಸಾಮರ್ಥ್ಯವನ್ನು ಹಂತ ಹಂತವಾಗಿ ಮೀಸಲಿಡಲು ತಿಳಿಸಲಾಗಿದೆ ಎಂದು ಹೇಳಿದರು.
ಇಂದಿನಿಂದ 45 ವರ್ಷ ಮೇಲ್ಪಟ್ಟವರಿಗೆಲ್ಲಾ ಲಿಸಿಕೆ ನೀಡಲಾಗುತ್ತಿದ್ದು, ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಐಟಿ ಸಂಸ್ಥೆ ಹಾಗೂ ಇನ್ನಿತರ ಉಪ ಕೇಂದ್ರಗಳಲ್ಲಿಯೂ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಗೌರವ್ ಗುಪ್ತಾ ಅವರು ಮಂಜುನಾಥ್ ಪ್ರಸಾದ್ ರವರಿಂದ ಪಾಲಿಕೆ ಕೇಂದ್ರ ಕಛೇರಿ ಆಯುಕ್ತರ ಕೊಠಡಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ವಲಯ ಆಯುಕ್ತರುಗಳಾದ ಡಿ. ರಂದೀಪ್, ರಾಜೇಂದ್ರ ಚೋಳನ್, ಮನೋಜ್ ಜೈನ್, ರೆಡ್ಡಿ ಶಂಕರ ಬಾಬು, ಬಸವರಾಜು, ತುಳಸಿ ಮದ್ದಿನೇನಿ, ರವೀಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.