ಹಲವು ಉದ್ದಿಮೆಗಳಿಗೆ ಸ್ಟಾರ್ ಎಕ್ಸ್‌ಪೋರ್ಟರ್ ಪುರಸ್ಕಾರ ಪ್ರದಾನ
ಬೆಂಗಳೂರು:
ರಾಜ್ಯದಲ್ಲಿ ಕೈಗಾರಿಕಾ ವಲಯವನ್ನು ಸಮಗ್ರವಾಗಿ ಬೆಳೆಸಲು ಗಂಭೀರ ಚಿಂತನೆ ನಡೆಸಲಾಗಿದ್ದು, ಈ ನಿಟ್ಟಿನಲ್ಲಿ ಹಲವು ಉಪಯುಕ್ತ ಕ್ರಮಗಳಿಗೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ವಿಷನ್ ಗ್ರೂಪ್‌ಗಳು ಸೇರಿದಂತೆ ಹಲವು ಸಾಂಸ್ಥಿಕ ವ್ಯವಸ್ಥೆಗಳು ಇದರಲ್ಲಿ ರಚನಾತ್ಮಕ ಪಾತ್ರ ವಹಿಸಲಿವೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಿಂದ (ಎಫ್‌ಕೆಸಿಸಿಐ) ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ರಫ್ತು ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪನವರ ಒಡೆತನದ, ಬಾಗಲಕೋಟೆಯಲ್ಲಿರುವ ಇಂಡಿಯನ್ ಕೇನ್ ಪವರ್ ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಉದ್ಯಮಗಳಿಗೆ ‘ಸ್ಟಾರ್ ಎಕ್ಸ್‌ಪೋರ್ಟರ್ ರಫ್ತುದಾರ’ ಪುರಸ್ಕಾರ ಪ್ರದಾನ ಮಾಡಲಾಯಿತು.
ಪ್ರಶಸ್ತಿಗೆ ಪಾತ್ರವಾದ ಕಂಪನಿಗಳಲ್ಲಿ ಜಿ.ಇ.ಇಂಡಿಯಾ ಇಂಡಸ್ಟ್ರಿಯಲ್ ಪ್ರೈವೇಲ್ ಲಿಮಿಟೆಡ್, ಯಶಸ್ವಿ ಫಿಶ್ ಮೀಲ್ ಅಂಡ್ ಆಯಿಲ್ ಕಂಪನಿ, ಮೈಕ್ರೋ ಲ್ಯಾಬ್ಸ್ ಲಿಮಿಟೆಡ್, ಮುಕ್ಕಾ ಪ್ರೋಟೀನ್ಸ್ ಲಿಮಿಟೆಡ್, ಡಿಸಿಎಕ್ಸ್ ಸಿಸ್ಟಮ್ಸ್ ಲಿಮಿಟೆಡ್, ಲೂಯಿಸ್ ಡ್ರೈಫಸ್ ಕಂಪನಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್‌ಗಳೂ ಸೇರಿವೆ.
ಮಿಕ್ಕಂತೆ, ವೆಟೋಜೆನ್ ಅನಿಮಲ್ ಹೆಲ್ತ್ ಎಲ್‌ಎಲ್‌ಪಿ, ನ್ಯೂಮ್ಯಾಟಿಕ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆರ್.ಆರ್. ಇಂಡಸ್ಟ್ರೀಸ್‌ಗಳಿಗೆ ‘ಅತ್ಯುತ್ತಮ ರಫ್ತುದಾರ ಸಂಸ್ಥೆ’ ಪ್ರಶಸ್ತಿಗಳನ್ನು ಕೊಡಲಾಯಿತು.
ಕಾರ್ಯಕ್ರಮದಲ್ಲಿ ಸೌದ್ ಅಲ್ ಮಾರೋವಲ್, ರಮೇಶ್‌ಚಂದ್ರ ಲಹೋಟಿ, ಎಂ ಜಿ ಬಾಲಕೃಷ್ಣ, ಉಮಾ ರೆಡ್ಡಿ, ಕೆ.ಲಕ್ಷ್ಮಣನ್, ದೇವವ್ರತ ದಾಸ್ ಉಪಸ್ಥಿತರಿದ್ದರು.