ಬೆಂಗಳೂರು:
ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸುವಂತೆ ದೇವರು ಸೂಚಿಸಿದ್ದ ಎಂದು ಬೆಂಗಳೂರು ರೈಲ್ವೆ ವಿಭಾಗದ ಮಾಲೂರು ಮತ್ತು ತ್ಯಾಕಲ್ ನಡುವೆ ಹಾದು ಹೋಗುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ ಆರೋಪಿ ಹೇಳಿದ್ದಾನೆ.
ಏಪ್ರಿಲ್ 16 ರಂದು ಬೆಂಗಳೂರು ರೈಲ್ವೆ ವಿಭಾಗದ ಮಾಲೂರು ಮತ್ತು ತ್ಯಾಕಲ್ ನಡುವೆ ಹಾದು ಹೋಗುತ್ತಿದ್ದ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.
ಈ ಘಟನೆ ಸಂಬಂಧ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) 36 ವರ್ಷದ ಅಭಿಜಿತ್ ಅಗರ್ವಾಲ್ ಎಂಬಾತನನ್ನು ಬಂಧನಕ್ಕೊಳಪಡಿಸಿದೆ.
ಬಂಧಿತ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈ ವೇಳೆ ಆರೋಪಿ, ಕಲ್ಲು ತೂರಾಟ ನಡೆಸುವಂತೆ ದೇವರು ಸೂಚಿಸಿದ್ದ. ಇದರಿಂದ ನನಗೆ ಊಟ ಸಿಗುತ್ತದೆ ಎಂದು ಹೇಳಿಕೊಂಡಿದ್ದಾನೆ.
ನಾನು ಮತ್ತು ನನ್ನ ತಂಡ ನಾಗರೀಕ ಉಡುಪಿನಲ್ಲಿ ರೈಲ್ವೇ ಹಳಿಗಳ ಮೇಲೆ ಗಸ್ತು ತಿರುಗುತ್ತಿದ್ದೆವು. ಈ ವೇಳೆ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಲಾಗಿತ್ತು. ಆತ ಹಳಿಗಳ ಮೇಲಿದ್ದ ಜೆಲ್ಲಿ ಕಲ್ಲುಗಳನ್ನು ಸಂಗ್ರಹಿಸುತ್ತಿದ್ದ. ಹಳಿಗಳ ಮೇಲೆ ಪಾಟ್ನಾ ಹಮ್ಸಾಫರ್ ಎಕ್ಸ್‌ಪ್ರೆಸ್ (ಟ್ರೇನ್ ಸಂಖ್ಯೆ. 22354) ಹಾದು ಹೋಗಬೇಕಿತ್ತು. ಅಷ್ಟರಲ್ಲಾಗಲೇ ಆರೋಪಿಯನ್ನು ಬಂಧನಕ್ಕೊಫಡಿಸಿದೆವು ಎಂದು ಆರ್‌ಪಿಎಫ್‌ನ ಪ್ಯಾಸೆಂಜರ್ ಸರ್ವೀಸಸ್ ಇನ್ಸ್‌ಪೆಕ್ಟರ್ ಎಸ್ ಕೆ ಥಾಪಾ ಅವರು ಹೇಳಿದ್ದಾರೆ.
ಬಂಧಿತ ವ್ಯಕ್ತಿ ಮಾನಸಿಕ ಖಿನ್ನತೆಗೊಳಗಾದ ಸ್ಥಿತಿಯಲ್ಲಿದ್ದಾನೆ. ಆತನ ಇಟ್ಟುಕೊಂಡಿದ್ದ ಚೀಲದಲ್ಲಿ ಸಾಕಷ್ಟು ಆಹಾರ ಪದಾರ್ಥಗಳಿದ್ದವು. ರೈಲ್ವೇ ಹಳಿ-ನಿಲ್ದಾಣಗಳಲ್ಲಿ ಕುಳಿತು ಆಹಾರ ಸೇವಿಸುವ ಈತ, ಅಲ್ಲಿಯೇ ಮಲಗುತ್ತಿದ್ದ. ರೈಲುಗಳ ಮೇಲೆ ಕಲ್ಲು ಎಸೆಯಲು ದೇವರು ತನಗೆ ಆಜ್ಞೆಯನ್ನು ಕೊಟ್ಟಿದ್ದು. ಇದರಿಂದ ಆಹಾರ ಸಿಗುತ್ತದೆ ಎಂದು ನಂಬಿದ್ದಾನೆಂದು ತಿಳಿಸಿದ್ದಾರೆ.
ಕಲ್ಲು ತೂರಾಟದಿಂದ ರೈಲಿನ ಒಳಗೆ ಯಾವುದೇ ರೀತಿ ಹಾನಿಯಾಗಿಲ್ಲ. ಯಾವುದೇ ಜನರಿಗೂ ಗಾಯ ಅಥವಾ ಹಾನಿಯಾಗಿಲ್ಲ ಎಂದು ರೈಲ್ವೇ ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರಿನಲ್ಲಿ ಕಲ್ಲು ತೂರಾಟ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ 3 ಪಾಳಿಗಳ ರೈಲು ಸಂಚಾರವನ್ನು ಇದೀಗ 2ಕ್ಕೆ ಇಳಿಸಿದ್ದೇವೆ. ಅಲ್ಲದೆ, ಹಳಿಗಳ ಮೇಲೆ ಕಾವಲಿಗೆ ಪ್ರತಿ ಪಾಳಿಯಲ್ಲಿ ಸುಮಾರು 100 ಜನರಂತೆ 12 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಲಾಗುತ್ತದೆ. ಇದರಿಂದ ಆರೋಪಿಗಳ ಬಂಧನಕ್ಕೆ ಸಹಾಯವಾಗಲಿದೆ ಎಂದು ಆರ್‌ಪಿಎಫ್ ವಿಭಾಗೀಯ ಭದ್ರತಾ ಆಯುಕ್ತ ದೇವಾಂಶು ಶುಕ್ಲಾ ಅವರು ಹೇಳಿದ್ದಾರೆ.