ಗದಗ / ಲಕ್ಕುಂಡಿ / ಬೆಂಗಳೂರು: ಹೊಸ ಮನೆ ಕಟ್ಟಲು ಅಡಿಪಾಯ ತೋಡುತ್ತಿದ್ದ ವೇಳೆ ಭೂಮಿಯೊಳಗಿಂದ ಬಂಗಾರ ತುಂಬಿದ ಮಡಿಕೆ ಪತ್ತೆಯಾದ ಅಪರೂಪದ ಘಟನೆ ಗದಗ ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ತಾಯಿ–ಮಗ ಇಬ್ಬರೇ ಇದ್ದ ಕುಟುಂಬ ಈ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಈ ಅಚ್ಚರಿ ಎದುರಾಗಿದೆ.
ಗಂಗವ್ವ ರಿತ್ತಿ ಅವರ ಕುಟುಂಬದ ಸ್ವಂತ ಜಾಗದಲ್ಲಿ ಫೌಂಡೇಶನ್ ತೋಡುವಾಗ ಮಡಿಕೆಯೊಂದು ಸಿಕ್ಕಿದೆ. ಕುತೂಹಲದಿಂದ ತೆರೆಯುತ್ತಿದ್ದಂತೆ ಬಂಗಾರದ ಸರ, ಕಿವಿಯೋಲೆ ಸೇರಿದಂತೆ ವಿವಿಧ ಆಭರಣಗಳು ಪತ್ತೆಯಾಗಿವೆ. 100–200 ಗ್ರಾಂ ಬಂಗಾರ ನೋಡೋದೇ ಅಪರೂಪವಾಗಿರುವ ಈ ಕಾಲದಲ್ಲಿ ಕೆಜಿ ಲೆಕ್ಕದ ಬಂಗಾರದ ಆಭರಣಗಳು ಸಿಕ್ಕಿರುವ ಸುದ್ದಿ ಊರಿಡೀ ಹರಡುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು.






ಸ್ವಇಚ್ಛೆಯಿಂದ ಸರ್ಕಾರಕ್ಕೆ ಹಸ್ತಾಂತರ ಬಂಗಾರದ ಮಡಿಕೆ ಸಿಕ್ಕ ವಿಷಯವನ್ನು ಕುಟುಂಬಸ್ಥರು ತಕ್ಷಣವೇ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಲಕ್ಕುಂಡಿ ಪ್ರಾಧಿಕಾರದ ಸದಸ್ಯರು, ಪುರಾತತ್ವ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಉಪಸ್ಥಿತಿಯಲ್ಲಿ ಬಂಗಾರವನ್ನು ಸುರಕ್ಷಿತವಾಗಿ ಗಣೇಶ ದೇವಸ್ಥಾನದಲ್ಲಿ ಇಡಲಾಗಿದ್ದು, ಶಸ್ತ್ರಸಜ್ಜಿತ ಪೊಲೀಸರು ಕಾವಲು ನಿಂತಿದ್ದಾರೆ. ವಿಶೇಷವಾಗಿ, ಮಡಿಕೆಯನ್ನು ಮೊದಲು ಕಂಡುಹಿಡಿದ ಮಗನೇ ಇದನ್ನು ಸರ್ಕಾರಕ್ಕೆ ನೀಡಲು ಮುಂದಾದ ಕ್ರಮಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಕಾನೂನು ಏನು ಹೇಳುತ್ತದೆ?
ಭೂಮಿಯೊಳಗೆ ಸಿಕ್ಕ ನಿಧಿ 100 ವರ್ಷಕ್ಕಿಂತ ಹಳೆಯದಾದರೆ ಅದು ಸರ್ಕಾರದ ಸ್ವತ್ತು ಆಗುತ್ತದೆ. ಇಂತಹ ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡುವುದು ಕಡ್ಡಾಯ. ನಿಯಮಾನುಸಾರ ಜಾಗದ ಮಾಲೀಕರಿಗೆ ಐದನೇ ಒಂದು ಭಾಗದ ಹಂಚಿಕೆ ನೀಡುವ ಬಗ್ಗೆ ಜಿಲ್ಲಾಧಿಕಾರಿ ತೀರ್ಮಾನ ಕೈಗೊಳ್ಳುತ್ತಾರೆ. 100 ವರ್ಷಕ್ಕಿಂತ ಕಡಿಮೆ ಅವಧಿಯ ಸ್ವತ್ತಾಗಿದ್ದರೆ ಕರ್ನಾಟಕ ನಿಧಿ ಕಾಯ್ದೆ–1962ರ ಪ್ರಕಾರ ವಿಚಾರಣೆ ನಡೆಸಿ ಮುಂದಿನ ನಿರ್ಧಾರ ಮಾಡಲಾಗುತ್ತದೆ. ನಿಧಿ ಸಿಕ್ಕ ವಿಚಾರವನ್ನು ಮರೆಮಾಚಿದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆಯ ವಿಧಾನದೂ ಇದೆ.

ಈ ಪ್ರಕರಣದಲ್ಲೂ ಗಂಗವ್ವ ಕುಟುಂಬಸ್ಥರು ಯಾವುದೇ ಹಿಂಜರಿಕೆಯಾಗದೆ ಸ್ವಇಚ್ಛೆಯಿಂದಲೇ ಬಂಗಾರದ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಇದೀಗ ಈ ಬಂಗಾರ ಯಾವ ಕಾಲಘಟ್ಟಕ್ಕೆ ಸೇರಿದ್ದು ಎಂಬುದರ ಬಗ್ಗೆ ಪುರಾತತ್ವ ಇಲಾಖೆ ಪರಿಶೀಲನೆ ನಡೆಸಲಿದೆ. ಬಂಗಾರದ ಬೆಲೆ ಗಗನಕ್ಕೇರಿರುವ ಈ ಸಮಯದಲ್ಲಿ ಕೈಗೆ ಬಂದ ಖಜಾನೆಯನ್ನು ಕಾನೂನಿಗೆ ಒಪ್ಪಿಸಿದ ಈ ಕುಟುಂಬದ ನಿಲುವು ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.
