ಬೆಂಗಳೂರು: ಆನ್ಲೈನ್ ಜೂಜು ಮತ್ತು ಬೆಟ್ಟಿಂಗ್ ಮೂಲಕ ಮಾಡಿಕೊಂಡಿದ್ದ ಸುಮಾರು ₹60 ಲಕ್ಷ ಸಾಲ ತೀರಿಸಲು ಬ್ಯಾಂಕ್ ಲಾಕರ್ನಲ್ಲಿದ್ದ ₹4 ಕೋಟಿ ಮೌಲ್ಯದ 2.753 ಕೆಜಿ ಚಿನ್ನಾಭರಣ ಕಳವು ಮಾಡಿದ್ದ ಆರೋಪದಡಿ ಇಂಡಿಯನ್ ಬ್ಯಾಂಕ್ನ ಸಹಾಯಕ ವ್ಯವಸ್ಥಾಪಕನನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಿರಣ್ ಕುಮಾರ್ (33) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು ಒಂದು ಕಾಲು ಕೆಜಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿದ್ಯಾರಣ್ಯಪುರ ನಿವಾಸಿಯಾಗಿರುವ ಆರೋಪಿ ಮೂಲತಃ ಆಂಧ್ರಪ್ರದೇಶದವನು. 2016ರಿಂದ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದ ಆತ 2025ರ ಜೂನ್ನಿಂದ ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದನು.

ತೋಯಜಾಕ್ಷಿ ಎಂಬ ಮಹಿಳೆ ಆರು ತಿಂಗಳ ಹಿಂದೆ ಬ್ಯಾಂಕ್ನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು. ಇತ್ತೀಚೆಗೆ ಸಾಲ ತೀರಿಸಿ ಒಡವೆಗಳನ್ನು ವಾಪಸ್ ಪಡೆಯಲು ಬಂದಾಗ ಪ್ಯಾಕೆಟ್ನಲ್ಲಿದ್ದ ಕೆಲವು ಆಭರಣ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ವಿಷಯವನ್ನು ಬ್ಯಾಂಕ್ ವ್ಯವಸ್ಥಾಪಕರ ಗಮನಕ್ಕೆ ತಂದ ಬಳಿಕ ಆಂತರಿಕ ಪರಿಶೀಲನೆ ನಡೆಸಲಾಯಿತು.
ಪರಿಶೀಲನೆ ವೇಳೆ ಕಳೆದ ಒಂದು ವರ್ಷದಲ್ಲಿ ಮಂಜೂರು ಮಾಡಲಾಗಿದ್ದ 207 ಗೋಲ್ಡ್ ಲೋನ್ ಪ್ಯಾಕೆಟ್ಗಳಲ್ಲಿ ಸುಮಾರು 21 ಪ್ಯಾಕೆಟ್ಗಳಲ್ಲಿ ಒಟ್ಟು 2.753 ಕೆಜಿ ಚಿನ್ನ ಕಾಣೆಯಾಗಿದೆ ಎಂಬುದು ಪತ್ತೆಯಾಯಿತು.
ತನಿಖೆಯ ವೇಳೆ ಆರೋಪಿ ಕಿರಣ್ ಬ್ಯಾಂಕ್ ವಲಯ ಕಚೇರಿಗೆ ಹಾಜರಾಗಿ ಕಳ್ಳತನವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಳುವಾದ ಚಿನ್ನವನ್ನು ಕತ್ರಿಗುಪ್ಪೆಯ ಮಣಪ್ಪುರಂ ಫೈನಾನ್ಸ್ ಹಾಗೂ ಎಂ.ಎಸ್.ಪಾಳ್ಯದ ಮುತ್ತೂಟ್ ಫೈನಾನ್ಸ್ನಲ್ಲಿ ಅಡವಿಟ್ಟಿರುವುದಾಗಿ ಹೇಳಿದ್ದಾನೆ.
ಈ ಕುರಿತು ಬಂದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ವಿಚಾರಣೆ ಪ್ರಕಾರ, ಆನ್ಲೈನ್ ಜೂಜು ಮತ್ತು ಬೆಟ್ಟಿಂಗ್ ವ್ಯಸನಕ್ಕೆ ಒಳಗಾಗಿದ್ದ ಆರೋಪಿ ಹಲವು ವರ್ಷಗಳಿಂದ ಹಣ ಕಳೆದುಕೊಂಡಿದ್ದು, ಸುಮಾರು ₹60 ಲಕ್ಷ ಸಾಲದಲ್ಲಿ ಸಿಲುಕಿದ್ದನು. ಸಾಲದಿಂದ ಹೊರಬರಲು ಆರು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಚಿನ್ನ ಕಳವು ಮಾಡಿ ಅಡವಿಟ್ಟು ಬಂದ ಹಣದಿಂದ ಭಾಗಶಃ ಸಾಲ ತೀರಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.
ಮತ್ತಷ್ಟು ಚಿನ್ನ ವಶಪಡಿಸಿಕೊಳ್ಳುವ ಮತ್ತು ಬ್ಯಾಂಕ್ ಒಳಾಂಗಣ ಸುರಕ್ಷತಾ ಕ್ರಮಗಳಲ್ಲಿ ಯಾವುದೇ ಲೋಪವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
