ಬೆಂಗಳೂರು: ಹಬ್ಬದ ಸಂದರ್ಭದಲ್ಲಿನ ಹೆಚ್ಚಿದ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ, ನೈಋತ್ಯ ರೈಲ್ವೆಯು ಬೆಂಗಳೂರು (ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್) ಮತ್ತು ಬೀದರ್ ನಡುವಿನ ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಮುಂದುವರಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 06539 (ಎಸ್ಎಂವಿಟಿ ಬೆಂಗಳೂರು – ಬೀದರ್) 2026ರ ಜನವರಿ 2ರಿಂದ ಫೆಬ್ರವರಿ 27ರವರೆಗೆ ಪ್ರತಿ ಶುಕ್ರವಾರ ಮತ್ತು ಭಾನುವಾರಗಳಂದು ಸಂಚರಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 06540 (ಬೀದರ್ – ಎಸ್ಎಂವಿಟಿ ಬೆಂಗಳೂರು) 2026ರ ಜನವರಿ 3ರಿಂದ ಫೆಬ್ರವರಿ 28ರವರೆಗೆ ಪ್ರತಿ ಶನಿವಾರ ಮತ್ತು ಸೋಮವಾರಗಳಂದು ಕಾರ್ಯನಿರ್ವಹಿಸಲಿದೆ.
ಈ ವಿಶೇಷ ರೈಲುಗಳು ಒಟ್ಟು 17 ಟ್ರಿಪ್ಗಳನ್ನು ನಡೆಸಲಿದ್ದು, ಪ್ರಸ್ತುತ ಇರುವ ಸಮಯಪಟ್ಟಿ, ನಿಲುಗಡೆ ನಿಲ್ದಾಣಗಳು ಹಾಗೂ ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಸಂಚರಿಸಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಜನವರಿ 4ರಂದು ಎಸ್ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ನಡೆಯಲಿರುವ ನಾನ್–ಇಂಟರ್ಲಾಕಿಂಗ್ ಕಾಮಗಾರಿಯ ಹಿನ್ನೆಲೆ, ಕೆಲವು ದಿನಗಳ ಮಟ್ಟಿಗೆ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
👉 ಜನವರಿ 3ರಂದು ಬೀದರ್ನಿಂದ ಹೊರಡುವ ರೈಲು ಸಂಖ್ಯೆ 06540, ಎಸ್ಎಂವಿಟಿ ಬೆಂಗಳೂರು ತಲುಪುವ ಬದಲು ಯಲಹಂಕ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
👉 ಜನವರಿ 4ರಂದು ಎಸ್ಎಂವಿಟಿ ಬೆಂಗಳೂರಿನಿಂದ ಹೊರಡಬೇಕಿದ್ದ ರೈಲು ಸಂಖ್ಯೆ 06539, ಅಂದು ಯಲಹಂಕ ನಿಲ್ದಾಣದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ.
ಈ ಅವಧಿಯಲ್ಲಿ ಎಸ್ಎಂವಿಟಿ ಬೆಂಗಳೂರು ಮತ್ತು ಯಲಹಂಕ ನಡುವಿನ ರೈಲು ಸಂಚಾರ ರದ್ದಾಗಿರುತ್ತದೆ ಎಂದು ನೈಋತ್ಯ ರೈಲ್ವೆ ಸ್ಪಷ್ಟಪಡಿಸಿದೆ.
