ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ 3,802 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮಕ್ಕೆ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ಅವರು ಅಧಿಕೃತವಾಗಿ ಇಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ 15 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಆಯುಕ್ತರು, ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ–2014 ಹಾಗೂ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ, ನಿಯಂತ್ರಣ ಮತ್ತು ಪರವಾನಿಗೆ) ಯೋಜನೆ–2020ರ ಮಾರ್ಗಸೂಚಿಗಳ ಅನ್ವಯವಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ಸಮೀಕ್ಷೆಯನ್ನು 20 ಸೆಪ್ಟೆಂಬರ್ 2024ರಿಂದ 6 ಜನವರಿ 2025ರವರೆಗೆ ಸರ್ಕಾರದ ಅಧಿಕೃತ ಆಪ್ ಮೂಲಕ ನಡೆಸಲಾಗಿದ್ದು, ಪಾಲಿಕೆಯ ಮಾರ್ಷಲ್ಗಳು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು (CRP), ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಹೊಲಿಗೆ ಶಿಕ್ಷಕರಿಂದ ಸ್ಥಳ ಪರಿಶೀಲನೆ ನಡೆಸಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ.

ಗುರುತಿಸಲಾದ ಉಳಿದ ಬೀದಿ ಬದಿ ವ್ಯಾಪಾರಿಗಳಿಗೆ ಅವರು ವ್ಯಾಪಾರ ಮಾಡುವ ಸ್ಥಳದಲ್ಲೇ ಗುರುತಿನ ಚೀಟಿಗಳನ್ನು ವಿತರಿಸಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಗುರುತಿನ ಚೀಟಿ ಹೊಂದಿರುವ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತಿದ್ದು, ವ್ಯಾಪಾರದ ವೇಳೆ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಸೂಚಿಸಿದರು. ಗುರುತಿನ ಚೀಟಿ ಇಲ್ಲದೆ ವ್ಯಾಪಾರ ನಡೆಸುವುದು ಅಕ್ರಮವಾಗಿದ್ದು, ಅಂತಹ ವ್ಯಾಪಾರಿಗಳ ಮಾಹಿತಿ ಪಾಲಿಕೆಗೆ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಅಪರ ಆಯುಕ್ತರಾದ ನವೀನ್ ಕುಮಾರ್ ರಾಜು, ಜಂಟಿ ಆಯುಕ್ತರಾದ ಮಧು, ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.
