ಬೆಂಗಳೂರು, ಮಾರ್ಚ್ 14: ಗೃಹ ಬಳಕೆಗಾಗಿ ನೀಡಲಾಗುವ LPG ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಹಲವು ಜಿಲ್ಲೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ ಇಲಾಖೆ ಪ್ರಕಟಣೆ ಪ್ರಕಾರ, ಸಚಿವರ ಸೂಚನೆಯಂತೆ ರಾಜ್ಯಾದ್ಯಂತ ಪರಿಶೀಲನೆ ನಡೆಸಿ ಗೃಹ ಬಳಕೆ ಸಿಲಿಂಡರ್ಗಳನ್ನು ವಾಣಿಜ್ಯ ಬಳಕೆಗೆ ಬಳಸುತ್ತಿದ್ದ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಈ ಕಾರ್ಯಾಚರಣೆಯಲ್ಲಿ
- ಬೆಂಗಳೂರು ಪಿಣ್ಯದಲ್ಲಿ 45 ಸಿಲಿಂಡರ್,
- ಚಿಕ್ಕಜಾಲದಲ್ಲಿ 209 ಸಿಲಿಂಡರ್,
- ಶಿವಮೊಗ್ಗ ಜಿಲ್ಲೆಯಲ್ಲಿ 3 ಸಿಲಿಂಡರ್,
- ಯಾದಗಿರಿ ಜಿಲ್ಲೆಯಲ್ಲಿ 46 ಸಿಲಿಂಡರ್,
- ದಾವಣಗರೆ ಜಿಲ್ಲೆಯಲ್ಲಿ 13 ಸಿಲಿಂಡರ್
ವಶಪಡಿಸಿಕೊಳ್ಳಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದಕ್ಕೂ ಹೊರತಾಗಿ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರದೇಶದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ನಡೆಸುತ್ತಿದ್ದ ಗ್ಯಾಸ್ ಏಜೆನ್ಸಿ ಅಂಗಡಿಯ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಇದೇವೇಳೆ ವಾಣಿಜ್ಯ ಬಳಕೆಯ LPG ಸಿಲಿಂಡರ್ಗಳ ವಿತರಣೆಯ ಕುರಿತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಒಟ್ಟು ವಾಣಿಜ್ಯ ಸಿಲಿಂಡರ್ಗಳಲ್ಲಿನ ಶೇ.20ರಷ್ಟು ಸಿಲಿಂಡರ್ಗಳನ್ನು ಅಗತ್ಯ ಸೇವೆಗಳಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
ಇವುಗಳಲ್ಲಿ
- ಆಸ್ಪತ್ರೆಗಳು
- ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳು
- ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳ ಕ್ಯಾಂಟೀನ್ಗಳು
- ಪ್ರಮುಖ ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಕೆ
- ಸರ್ಕಾರಿ ಕಚೇರಿಗಳು
- ವೃದ್ಧಾಶ್ರಮಗಳು
- ಪ್ರಮುಖ ಖಾಸಗಿ ವಲಯದ ಕಚೇರಿಗಳು
ಇತ್ಯಾದಿಗಳಿಗೆ ಆದ್ಯತೆಯಾಗಿ ವಾಣಿಜ್ಯ LPG ಸಿಲಿಂಡರ್ಗಳನ್ನು ವಿತರಿಸಲು ಸೂಚಿಸಲಾಗಿದೆ.
ಇಂದು ರಾಜ್ಯಾದ್ಯಂತ 14.2 ಕೆ.ಜಿ ಗೃಹ ಬಳಕೆಯ ಒಟ್ಟು 3,86,363 LPG ಸಿಲಿಂಡರ್ಗಳು ಹಾಗೂ 6,371 ವಾಣಿಜ್ಯ ಸಿಲಿಂಡರ್ಗಳನ್ನು ವಿತರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಗೃಹ ಬಳಕೆ ಸಿಲಿಂಡರ್ಗಳ ಪೂರೈಕೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
