ಗುಲಬರ್ಗಾ ವಿ.ವಿ. 41ನೇ ಘಟಿಕೋತ್ಸವ
ಕಲಬುರಗಿ:
ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ತಾವು ಬದ್ಧರಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಹೇಳಿದರು.
ಸೋಮವಾರ ಗುಲಬರ್ಗಾ ವಿ.ವಿ.ಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ ಡಾಕ್ಟರೇಟ್ ಮತ್ತು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ತಾವು ಸಚಿವರಾದ ನಂತರ ಪ್ರಥಮ ಬಾರಿಗೆ ವಿ. ವಿ. ಘಟಿಕೋತ್ಸವದಲ್ಲಿ ಭಾಗವಹಿಸುವುತ್ತಿರುವುದು ತಮಗೆ ಹೆಮ್ಮೆ ಎನಿಸುತ್ತಿದೆ. ಈ ಭಾಗದ ಶಿಕ್ಷಣ ಪ್ರಗತಿಗೆ 371ಜೆ ಮೀಸಲಾತಿ ಪೂರಕವಾಗಿದೆ ಎಂದರು.
ಗುಲಬರ್ಗಾ ವಿವಿ. ಶೈಕ್ಷಣಿಕ ಪ್ರಗತಿಯಲ್ಲಿ ಉತ್ತಮ ಹೆಜ್ಜೆ ಇಡುತ್ತಿದೆ ಎಂದ ಸಚಿವರು, ಇತ್ತೀಚೆಗೆ ಖಾಸಗಿ ವಿ.ವಿ ಗಳು ಶಿಕ್ಷಣದಲ್ಲಿ ಸ್ಪರ್ಧೆ ನೀಡುತ್ತಿದ್ದು, ಅದನ್ನು ನಮ್ಮ ವಿಶ್ವವಿದ್ಯಾಲಯಗಳು ಸವಾಲಾಗಿ ಸ್ವೀಕರಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
Presented Doctorates and Graduation to achievers of Kalburgi University at 41st Convocation Ceremony and assured necessary Educational Development for Kalyana Karnataka region, in presence of Honorable Governor Sri Thavarchand Gehlot, Vice-chancellor and University Heads pic.twitter.com/SSsdqfKeEk
— Dr MC Sudhakar (@drmcsudhakar) June 19, 2023
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ ಅವರು ಮಾತನಾಡಿದರು.
ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ: ಶಿಲ್ಪಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆಗೆ ಕಲಬುರಗಿ ಜಿಲ್ಲೆಯ ನಾಡೋಜ
ಮಾನಯ್ಯ ಬಡಿಗೇರ್, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗೆ ತಾತ್ಯಾರಾವ ಕಾಂಬ್ಳೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸಾಧನೆಗೆ ಬೆಂಗಳೂರು ಮೂಲದ ಎನ್.ಎಸ್.ಶ್ರೀನಾಥ ಅವರಿಗೆ ರಾಜ್ಯಪಾಲರು ಮತ್ತು ಮುಖ್ಯ ಅತಿಥಿಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ 26,590 ಸ್ನಾತಕ ಪದವಿ, 4,171 ಸ್ನಾತಕೋತ್ತರ ಪದವಿ ಸೇರಿ 30,761 ಅಭ್ಯರ್ಥಿಗಳಿಗೆ ಪದವಿ ಘೋಷಿಸಿ 129 ಅಭ್ಯರ್ಥಿಗಳಿಗೆ ಪಿ.ಎಚ್.ಡಿ. ಹಾಗೂ 72 ವಿದ್ಯಾರ್ಥಿಗಳಿಗೆ 165 ಚಿನ್ನದ ಪದಕ ಹಾಗೂ 23 ವಿದ್ಯಾರ್ಥಿಗಳಿಗೆ 15 ನಗದು ಚಿನ್ನದ ಬಹುಮಾನ ವಿತರಿಸಲಾಯಿತು.
ಗುಲಬರ್ಗಾ ವಿ.ವಿ ಕುಲಪತಿ ಪ್ರೊ. ದಯಾನಂದ ಅಗಸರ್, ಕುಲಸಚಿವ ಡಾ.ಬಿ.ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ.ಜ್ಯೋತಿ ಧಮ್ಮಪ್ರಕಾಶ ಸೇರಿದಂತೆ ವಿವಿಧ ಅಕಾಡೆಮಿಕ್, ಸಿಂಡಿಕೇಟ್ ಸದಸ್ಯರು, ವಿವಿಧ ನಿಕಾಯದ ಡೀನ್, ಅಧಿಕಾರಿಗಳು, ಬೋಧಕ-ಬೋಧಕೇತರ ವೃಂದ, ಪದವಿ ಪಡೆದ ವಿದ್ಯಾರ್ಥಿಗಳು ಅವರ ಕುಟುಂಬ ವರ್ಗದವರು ಭಾಗವಹಿಸಿದ್ದರು.