ಬೆಂಗಳೂರು, ಜನವರಿ 29: ಸ್ವದೇಶಿ ಮನೋಭಾವ, ರಾಷ್ಟ್ರೀಯ ಗೌರವ ಹಾಗೂ ಗ್ರಾಮೀಣ ಆರ್ಥಿಕತೆಗೆ ಬಲ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಎಲ್ಲಾ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಉಡುಪು ಧರಿಸುವಂತೆ ಪ್ರೋತ್ಸಾಹಿಸುವಂತೆ ಸುತ್ತೋಲೆ ಹೊರಡಿಸಿದೆ.
ಈ ಸಂಬಂಧ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಐಎಎಸ್ ಅವರು ಎಲ್ಲಾ ಸರ್ಕಾರಿ, ಅನುದಾನಿತ ಸಂಸ್ಥೆಗಳು, ನಿಗಮಗಳು, ಮಂಡಳಿಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಸುತ್ತೋಲೆ ಜಾರಿಗೊಳಿಸಿದ್ದು, ಸ್ವಯಂಪ್ರೇರಣೆಯಿಂದ ಖಾದಿ ಬಳಕೆಯನ್ನು ಉತ್ತೇಜಿಸಲು ಇಲಾಖಾ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಸುತ್ತೋಲೆಯಲ್ಲಿ ಖಾದಿ ಕೇವಲ ಉಡುಪಲ್ಲ, ಅದು ರಾಷ್ಟ್ರದ ಸ್ವಾಭಿಮಾನ, ಸ್ವದೇಶಿ ಚಿಂತನೆ ಮತ್ತು ಸ್ವಾತಂತ್ರ್ಯ ಹೋರಾಟದ ಸಂಕೇತ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಖಾದಿ ಉತ್ಪಾದನೆ ರಾಜ್ಯದ ಸಾವಿರಾರು ನೂಲುಗಾರರು ಮತ್ತು ನೇಕಾರರಿಗೆ ನೇರ ಹಾಗೂ ಪರೋಕ್ಷವಾಗಿ ಜೀವನೋಪಾಯ ಒದಗಿಸುವ ಪ್ರಮುಖ ಆಧಾರವಾಗಿದೆ ಎಂದು ಸರ್ಕಾರ ತಿಳಿಸಿದೆ.

ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ಪ್ರಮುಖ ಸಮಾರಂಭಗಳಲ್ಲಿ ಖಾದಿ ಉಡುಪು ಧರಿಸುವಂತೆ ಅಧಿಕಾರಿಗಳು ಹಾಗೂ ನೌಕರರಿಗೆ ಮಾರ್ಗದರ್ಶನ ನೀಡಲು ಇಲಾಖೆಗಳಿಗೆ ಮನವಿ ಮಾಡಲಾಗಿದೆ.
ಈ ಕ್ರಮದಿಂದ ಸರ್ಕಾರಿ ನೌಕರರಲ್ಲಿ ಸ್ವದೇಶಿ ಉತ್ಪನ್ನಗಳ ಗೌರವ, ರಾಷ್ಟ್ರೀಯ ಭಾವನೆ, ಸಾಮಾಜಿಕ ಜವಾಬ್ದಾರಿ ಹಾಗೂ ಭಾರತೀಯತೆ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 176 ಖಾದಿ ಸಂಘ-ಸಂಸ್ಥೆಗಳ ವಿವರಗಳು ಹಾಗೂ ಉತ್ಪನ್ನ ಮಾಹಿತಿಯನ್ನು https://khadi.karnataka.gov.in ವೆಬ್ಸೈಟ್ನಲ್ಲಿ ಪಡೆಯಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
