ಬೆಂಗಳೂರು: ಬೆಂಗಳೂರು ನಗರದಲ್ಲಿ ದಿನವೂ ಉತ್ಪಾದನೆಯಾಗುವ 500 ಟನ್ ಹಸಿಕಸವನ್ನು ಗ್ಯಾಸ್ ಆಗಿ ಪರಿವರ್ತಿಸುವ ಯೋಜನೆಗೆ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಾಲೀಕತ್ವದ ಗೇಲ್ (Gas Authority of India Limited) ಸಂಸ್ಥೆ ನಡುವಿನ ₹123 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.
ವಿಧಾನಸೌಧದಲ್ಲಿ ನಡೆದ ಒಪ್ಪಂದ ಹಸ್ತಾಂತರ ಸಮಾರಂಭದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಡಿಸಿಎಂ ಶಿವಕುಮಾರ್ ಅವರು ಹೇಳಿದರು:
“ಗೇಲ್ ಸಂಸ್ಥೆ ₹123 ಕೋಟಿ ರೂಪಾಯಿ ವೆಚ್ಚದಲ್ಲಿ ಬಯೋಗ್ಯಾಸ್ ತಯಾರಿಕಾ ಘಟಕವನ್ನು ಸ್ಥಾಪಿಸಲಿದೆ. ಸರ್ಕಾರ ಈಗಾಗಲೇ ಸ್ಥಳವನ್ನು ಒದಗಿಸಿದೆ. ಇದು ಬೆಂಗಳೂರಿನ ಮೊದಲ ಹಸಿಕಸದಿಂದ ಗ್ಯಾಸ್ ಉತ್ಪಾದನೆ ಯೋಜನೆ ಆಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಹಸಿರು ಯೋಜನೆಗಳಿಗೂ ಗೇಲ್ ಜೊತೆ ಸರ್ಕಾರ ಕೈಜೋಡಿಸಲಿದೆ,” ಎಂದರು.
ಅವರು ಮುಂದುವರೆದು,
“ಈ ಯೋಜನೆಯಿಂದ ಬೆಂಗಳೂರಿನ ಕಸದ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ದೊರೆಯಲಿದೆ. ಉತ್ಪಾದನೆಯಾಗುವ ಗ್ಯಾಸ್ ಅನ್ನು ಸಾರ್ವಜನಿಕರು, ಹೋಟೆಲ್ ಉದ್ಯಮಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು ಉಪಯೋಗಿಸಲು ಅವಕಾಶ ಕಲ್ಪಿಸಲಾಗುತ್ತದೆ. ಇದು ಪರಿಸರ ಮತ್ತು ಆರ್ಥಿಕ ಹಿತದೃಷ್ಟಿಯಿಂದ ಮಹತ್ವದ ಹೆಜ್ಜೆ ಆಗಿದೆ,” ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಈ ಯೋಜನೆ ನಗರದ ಘನತ್ಯಾಜ್ಯ ನಿರ್ವಹಣೆಗೆ ಪರ್ಯಾಯ ಮಾರ್ಗವನ್ನು ಒದಗಿಸುವುದರ ಜೊತೆಗೆ, ಶುದ್ಧ ಇಂಧನ ಬಳಕೆಗೆ ಉತ್ತೇಜನ ನೀಡಲಿದೆ.
