ಬೆಂಗಳೂರು, ಮಾರ್ಚ್ 16: ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರಿಗೆ ಸರ್ಕಾರಿ ಜಮೀನು ಇಲ್ಲದಿದ್ದರೆ, ಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ನೀಡಿ ಖಾಸಗಿ ಜಮೀನು ಖರೀದಿಸಲು ಸರ್ಕಾರ ಸಿದ್ಧವಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌವ್ಹಾಣ್ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಅವರು ಹೇಳಿದರು, “ಕಳೆದ 70 ವರ್ಷಗಳಿಂದ ಎಲ್ಲಾ ಸರ್ಕಾರಗಳು ಭೂಮಿಯನ್ನು ರೈತರಿಗೆ ಮತ್ತು ಜನಪರ ಯೋಜನೆಗಳಿಗೆ ಮಂಜೂರು ಮಾಡಿವೆ, ಇದರಿಂದಾಗಿ ಸ್ಮಶಾನಕ್ಕೆ ಭೂಮಿ ಇಲ್ಲದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಕಳೆದ ಹತ್ತು ವರ್ಷಗಳಿಂದ ಎಲ್ಲಾ ಸರ್ಕಾರಗಳು ವಸತಿ ಪ್ರದೇಶಗಳಿಗೆ ಅಗತ್ಯವಿರುವಷ್ಟು ಸ್ಮಶಾನ ಭೂಮಿ ನೀಡಲು ಪ್ರಯತ್ನಿಸುತ್ತಿವೆ. ಹೈಕೋರ್ಟ್ ಸಹ ಈ ವಿಷಯದಲ್ಲಿ ಸರ್ಕಾರದ ಬೆನ್ನುಹತ್ತಿದೆ. ಸರ್ಕಾರಿ ಜಮೀನು ಇದ್ದರೆ ಆ ಭೂಮಿಯನ್ನೇ ಸ್ಮಶಾನಕ್ಕೆ ಕಾಯ್ದಿರಿಸಲಾಗಿದೆ. ಆದರೆ, ಸರ್ಕಾರಿ ಜಮೀನು ಇಲ್ಲದ ಭಾಗಗಳಲ್ಲಿ 58 ಕೋಟಿ ರೂ. ಖರ್ಚು ಮಾಡಿ ಭೂಮಿಯನ್ನು ಖರೀದಿಸಲು ಮುಂದಾಗಿದ್ದೇವೆ” ಎಂದು ಅವರು ವಿವರಿಸಿದರು.
ಔರಾದ್ ತಾಲೂಕಿನ 154 ವಸತಿ ಪ್ರದೇಶಗಳಲ್ಲಿ 9 ಪ್ರದೇಶಗಳಲ್ಲಿ ಸ್ಮಶಾನ ಇಲ್ಲ ಎಂಬ ವರದಿ ಇದೆ. ಈ 9 ಗ್ರಾಮಗಳಲ್ಲಿ 2 ಗ್ರಾಮಗಳಿಗೆ ಸರ್ಕಾರಿ ಭೂಮಿ ಲಭ್ಯವಿದ್ದು, ಇನ್ನೂ 7 ವಸತಿ ಪ್ರದೇಶಗಳಿಗೆ ಪಕ್ಕದ ಗ್ರಾಮದಲ್ಲಿ ಭೂಮಿ ಲಭ್ಯವಿದೆ. ಈ ಭೂಮಿಯನ್ನು 15 ದಿನಗಳಲ್ಲಿ ಕಾಯ್ದಿರಿಸಲು ಸೂಚಿಸಲಾಗಿದೆ. ಖಾಸಗಿ ಜಮೀನು ಖರೀದಿಸಲು ಸಹ ಸರ್ಕಾರ ಸಿದ್ಧವಾಗಿದೆ. ಈ ಸಂಬಂಧ ಗ್ರಾಮ ಪಂಚಾಯತ್ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.
