ಬೆಂಗಳೂರು: ಸರ್ಕಾರಿ ನೌಕರರಿಗೆ ಸಿಕ್ಕಿರುವ ಹುದ್ದೆ ವಿಶೇಷಾಧಿಕಾರವಲ್ಲ, ಅದು ಜನಸೇವೆಯ ಕರ್ತವ್ಯವಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹೇಳಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವತಿಯಿಂದ ಆಯೋಜಿಸಿದ್ದ ಜಾಗೃತಿ ಸಪ್ತಾಹ 2025 ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಉಪನ್ಯಾಸ ನೀಡಿದ ಅವರು, “ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವನೆ ತಪ್ಪು. ಜಾಗೃತಿಯೊಂದಿಗೆ, ಸಮಯ ಪಾಲನೆಯೊಂದಿಗೆ ಕೆಲಸ ಮಾಡಿದಾಗ ಮಾತ್ರ ಶ್ರೇಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ನಮ್ಮಲ್ಲಿ ಸುಪ್ತವಾಗಿರುವ ಶಕ್ತಿಯನ್ನು ಎಚ್ಚರಿಸಿ ಗುರಿಯೊಂದಿಗೆ ಕಾರ್ಯನಿರ್ವಹಿಸಿದರೆ ಶ್ರೇಷ್ಠತೆಯನ್ನು ಸಾಧಿಸಬಹುದು,” ಎಂದರು.
ಪ್ರತಿಯೊಬ್ಬರಲ್ಲೂ ಮೌಲ್ಯ, ಕನಸು, ಗುರಿ ಅಡಗಿವೆ ಎಂದು ಅವರು ತಿಳಿಸಿ, “ಕೆಲವರು ಮಾತ್ರ ನಿಷ್ಠೆಯಿಂದ ಕೆಲಸ ಮಾಡಿದರೆ ಸಾಧನೆ ಸಾಧ್ಯವಿಲ್ಲ. ಕೆಳ ಹಂತದಿಂದ ಮೇಲ್ಮಟ್ಟದವರೆಗೂ ಎಲ್ಲರೂ ಒಂದೇ ಮನೋಭಾವದೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ದೇಶವನ್ನು ಮುಂದಕ್ಕೆ ಕೊಂಡೊಯ್ಯಬಹುದು,” ಎಂದು ಹೇಳಿದರು.
ಸರ್ಕಾರಿ ನೌಕರರು ಜನರಿಂದ ಬರುವ ತೆರಿಗೆ ಹಣದಿಂದ ಸಂಬಳ ಪಡೆಯುತ್ತಾರೆ ಎಂಬುದನ್ನು ನೆನಪಿಸಿಕೊಂಡು, “ನೀವು ಜನರ ಸೇವಕರಾಗಿದ್ದೀರಿ ಎಂಬ ಭಾವನೆ ಹೊಂದಿದಾಗ ಮಾತ್ರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಜವಾಬ್ದಾರಿ ಮತ್ತು ನಿಷ್ಠೆಯೊಂದಿಗೆ ಕೆಲಸ ಮಾಡಿದರೆ ಭ್ರಷ್ಟಾಚಾರ ರಹಿತ ಆಡಳಿತ ಸಾಧ್ಯ,” ಎಂದು ಅವರು ಒತ್ತಿಹೇಳಿದರು.
ಅದೇ ವೇಳೆ, ಲೋಕಾಯುಕ್ತ ಕಾಯ್ದೆಯಡಿ ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ವ್ಯವಸ್ಥೆಗಳ ಬಗ್ಗೆ ವಿವರಿಸಿದರು.
ಜಲಮಂಡಳಿಯ ಸಾಧನೆಗೆ ಮೆಚ್ಚುಗೆ
ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ನಗರದ 1.40 ಕೋಟಿ ಜನರಿಗೆ ನೀರು ಪೂರೈಸುವ ಕಾರ್ಯದಲ್ಲಿ ಜಲಮಂಡಳಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ ಹಲವಾರು ಪ್ರಶಸ್ತಿಗಳು ಲಭಿಸಿವೆ. ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಹೊಸ ಸಲಹೆಗಳು ಅಗತ್ಯ,” ಎಂದು ಹೇಳಿದರು.
ಜಲಮಂಡಳಿಗೆ 60 ವರ್ಷಗಳು ಪೂರ್ಣಗೊಂಡಿರುವುದರಿಂದ ವಜ್ರಮಹೋತ್ಸವ ಆಚರಿಸಲಾಗುತ್ತಿದೆ. “ಈ ಸಂದರ್ಭದಲ್ಲಿ ಮಂಡಳಿಯನ್ನು ಇನ್ನಷ್ಟು ಮುಂಚೂಣಿಗೆ ಕೊಂಡೊಯ್ಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ,” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರಿಗೆ ಗೌರವ ಸಲ್ಲಿಸಲಾಯಿತು.
