ಜ್ವರ ಮತ್ತು ಬೆನ್ನು ನೋವಿನಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ರಾಜ್ಯಪಾಲ, ಶುಕ್ರವಾರದೊಳಗೆ ಡಿಸ್ಚಾರ್ಜ್ ಆಗುವ ನಿರೀಕ್ಷೆ ಎಂದು ರಾಜಭವನ ಮೂಲಗಳು ತಿಳಿಸಿವೆ.
ಬೆಂಗಳೂರು: ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ತೀವ್ರ ಜ್ವರ ಮತ್ತು ಬೆನ್ನು ನೋವಿನಿಂದಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಾಜಭವನ ಮೂಲಗಳು ಗುರುವಾರ ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ, ರಾಜ್ಯಪಾಲರ ಆರೋಗ್ಯ ವಿಚಾರಿಸಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.
“ರಾಜ್ಯಪಾಲರನ್ನು ಸೋಮವಾರವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ. ಅವರು ಶುಕ್ರವಾರದೊಳಗೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ,” ಎಂದು ರಾಜಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯಪಾಲ ಗೆಹ್ಲೋಟ್ ಇತ್ತೀಚೆಗೆ ತಮ್ಮ ತವರು ರಾಜ್ಯವಾದ ಮಧ್ಯಪ್ರದೇಶಕ್ಕೆ ಭೇಟಿ ನೀಡಿ, ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
“ಸತತ ಪ್ರಯಾಣ ಮತ್ತು ಆಯಾಸದಿಂದಾಗಿ ಅವರಿಗೆ ಜ್ವರ ಮತ್ತು ಬೆನ್ನುನೋವು ಕಾಣಿಸಿಕೊಂಡಿರಬಹುದು,” ಎಂದು ಮೂಲಗಳು ತಿಳಿಸಿದ್ದಾರೆ.
