
Gruha jyothi scheme has nothing to do with electricity tariff hike Chief Minister Siddaramaiah
ಗೃಹ ಜ್ಯೋತಿ ಹೊರೆಯನ್ನು ಕೈಗಾರಿಕೆಗಳ ಮೇಲೆ ಹಾಕಲಾಗಿದೆ ಎನ್ನುವುದು ಪರಮ ಸುಳ್ಳು
ಕೈಗಾರಿಕೋದ್ಯಮಿಗಳ ಮನವಿಗೆ ಸ್ಪಂದನೆ; ಬೇಡಿಕೆಗಳ ಬಗ್ಗೆ ಪರಿಶೀಲಿಸಲು ಒಪ್ಪಿದ ಮುಖ್ಯಮಂತ್ರಿಗಳು
ಬೆಂಗಳೂರು:
ಗೃಹಜ್ಯೋತಿ ಯೋಜನೆಯ ಹೊರೆಯನ್ನು ಯಾರ ಮೇಲೂ ಹಾಕುತ್ತಿಲ್ಲ. ಇದೊಂದು ತಪ್ಪು ಅಭಿಪ್ರಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೈಗಾರಿಕೋದ್ಯಮಿಗಳಿಗೆ ಮನವರಿಕೆ ಮಾಡಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ ಅವರ ನೇತೃತ್ವದ ನಿಯೋಗವು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದ್ದನ್ನು ಮನವರಿಕೆ ಮಾಡಿಸಿದರು.
ನಮ್ಮ ಸರ್ಕಾರ ವಿದ್ಯುತ್ ಶುಲ್ಕವನ್ನು ಏರಿಸುವ ನಿರ್ಧಾರ ಮಾಡಿಲ್ಲ. ಕೆ.ಇ. ಆರ್.ಸಿಯು ಬೆಲೆ ಹೆಚ್ಚಳದ ನಿರ್ಧಾರವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಕೈಗೊಂಡಿತ್ತು ಎಂದು ವಿವರಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಬಿ.ವಿ.ಗೋಪಾಲರೆಡ್ಡಿ ಅವರ ನೇತೃತ್ವದ ಪದಾಧಿಕಾರಿಗಳ ನಿಯೋಗ ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ, ತಮ್ಮ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
— CM of Karnataka (@CMofKarnataka) June 23, 2023
ಇಂಧನ ಸಚಿವರಾದ @thekjgeorge, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರು ಸಭೆಯಲ್ಲಿ… pic.twitter.com/6Ka0YOWkHA
ನಿಯೋಗವು ಮಾಡಿರುವ ಮನವಿಯ ಕುರಿತು ಆರ್ಥಿಕ, ಇಂಧನ ಇಲಾಖೆ , ಕಾಸಿಯಾ, ಎಫ್.ಕೆ.ಸಿ.ಸಿ ಐ ಅವರೊಂದಿಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೆ.ಇ.ಆರ್.ಸಿ ತನ್ನ ಸುಂಕದ ಆದೇಶದಲ್ಲಿ ಉದ್ಯಮ ವಲಯಕ್ಕೆ ವಿದ್ಯುತ್ ದರವನ್ನು ಹೆಚ್ಚಿಸಿದ್ದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಹೆಚ್.ಟಿ ಕೈಗಾರಿಕೆಗಳ ಮೇಲೆ ವಿಧಿಸುವ ಶೇ 9 ರಷ್ಟು ವಿದ್ಯುತ್ ತೆರಿಗೆಯನ್ನು ಶೇ 3 ರಷ್ಟು ಇಳಿಸಬೇಕು ಎಂದು ಮನವಿ ಮಾಡಿದರು.
ಇಂಧನ ಶುಲ್ಕ (Fuel Escalation charges) ನಲ್ಲಿ ರಿಯಾಯಿತಿ ನೀಡಲು ಹಾಗೂ ಇತರೆ ರಾಜ್ಯಗಳಲ್ಲಿ ಎಂ.ಎಸ್.ಎಂ.ಇ ನೀತಿ ಹಾಗೂ ಕಾಯ್ದೆ ಇರುವಂತೆ ರಾಜ್ಯದಲ್ಲಿಯೂ ಕಾಯ್ದೆ ರಚನೆ ಮಾಡುವಂತೆ ಮನವಿ ಮಾಡಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಎಫ್.ಕೆ.ಸಿ.ಸಿ.ಐ ಪದಾಧಿಕಾರಿಗಳಾದ ರಮೇಶ್ ಚಂದ್ರ ಲಾಹೋಟಿ, ಎಂ.ಜಿ.ಬಾಲಕೃಷ್ಣ , ಡಾ: ಪ್ರಸಾದ್, ಬಿ.ಟಿ. ಮನೋಹರ್ ಉಪಸ್ಥಿತರಿದ್ದರು.