ಮೈಸೂರು:
“ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಭಾರತದ ಅತಿದೊಡ್ಡ ಕಾರ್ಯಕ್ರಮವೇ ಗೃಹಲಕ್ಷ್ಮಿ. ಸುಮಾರು 1.10 ಕೋಟಿ ಹೆಣ್ಣು ಮಕ್ಕಳು ಅರ್ಜಿ ಸಲ್ಲಿಸಿದ್ದು ಎಲ್ಲರ ಖಾತೆಗೂ 2 ಸಾವಿರ ಹಣ ಸೇರಲಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಆ. 30 ರಂದು ಮೈಸೂರಿನಲ್ಲಿ ನಡೆಯುವ ಗೃಹಲಕ್ಷ್ಮೀ ಯೋಜನೆ ಉದ್ಘಾಟನಾ ಸಮಾರಂಭದ ಸಿದ್ಧತೆಯ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
“ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ಭಾಗವಹಿಸಲಿದ್ದು, ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ ಭಾಗದ ಹೆಣ್ಣು ಮಕ್ಕಳು ನೇರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಇಂದು ಕಾರ್ಯಕ್ರಮ ನಡೆಯಲಿರುವ ಸ್ಥಳದ ಪೂರ್ವ ಪರಿಶೀಲನೆ ನಡೆಸಿದೆ. ದೇಶದಲ್ಲಿಯೇ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ರಾಜ್ಯದಲ್ಲಿ 1.10 ಕೋಟಿ ಮಹಿಳೆಯರು ರಿಜಿಸ್ಟರ್ ಆಗಿದ್ದಾರೆ.
— DK Shivakumar (@DKShivakumar) August 24, 2023
ಆರ್ಥಿಕವಾಗಿ… pic.twitter.com/nTltaQNwf0
ಈ ಕಾರ್ಯಕ್ರಮ 10,400 ಜಾಗಗಳಲ್ಲಿ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ, ಮೂರು ಪಂಚಾಯಿತಿಗಳಿಗೆ ಒಂದು ಕಡೆಯಂತೆ, ವಾರ್ಡ್‌ಗಳಲ್ಲಿ ಒಂದು ಕಡೆ, ಬೆಂಗಳೂರಿನ 198 ವಾರ್ಡ್‌ಗಳಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗಲಿದೆ. ಜೂಮ್ ಆನ್‌ಲೈನ್ ವೇದಿಕೆಯಲ್ಲೂ ಪ್ರಸಾರವಾಗಲಿದೆ.
ಇಡೀ ದೇಶದಲ್ಲೇ ವಿನೂತನವಾದ ಕಾರ್ಯಕ್ರಮ ಇದಾಗಿದೆ. ಪಂಚಾಯಿತಿ ಮಟ್ಟದ ಒಂದಷ್ಟು ಜನ ಹೆಣ್ಣು ಮಕ್ಕಳು ರಾಷ್ಟ್ರೀಯ ನಾಯಕರ ಜೊತೆ ನೇರವಾಗಿ ಸಂವಾದ ಮಾಡಬಹುದು. ಮೈಸೂರಿನಲ್ಲಿ ಇರುವ ವೇದಿಕೆಯ ಅಳತೆಯಷ್ಟೇ 140 ಅಡಿಯ ಪರದೆಯ ವ್ಯವಸ್ಥೆ ಮಾಡಿದ್ದು ಆ ಪರದೆಯಲ್ಲಿ ಎಲ್ಲಾ ಪಂಚಾಯಿತಿಗಳ ವೀಕ್ಷಕರನ್ನು ತೋರಿಸಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಫಲಾನುವಭವಿಗಳು ಮನೆಯ ಮುಂದೆ ” ನಾ ನಾಯಕಿ”, “ಗೃಹಲಕ್ಷ್ಮೀ” ಎಂದು ರಂಗೋಲಿ ಹಾಕಿ ಸಂಭ್ರಮಿಸುವ ಕಾರ್ಯಕ್ರಮವೂ ಇದೆ.
ಪ್ರತಿ ಯಜಮಾನಿಯ ಮನೆಗೆ ಹೋಗಿ ಅಧಿಕಾರಿಗಳು ಖುದ್ದಾಗಿ ಆಹ್ವಾನ ಪತ್ರಿಕೆ ನೀಡುತ್ತಾರೆ. ಯಾವುದೇ ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಇದು ಪಕ್ಷಾತೀತ ಕಾರ್ಯಕ್ರಮ. ಎಲ್ಲಾ ಪಕ್ಷದ ಶಾಸಕರು ಸಂಭ್ರಮದಿಂದ ಭಾಗವಹಿಸಬಹುದು.