
Gruha lakshmi Yojana to be launched on August 27 at 11,000 locations: D.K. Shivakumar
ಬೆಂಗಳೂರು:
“ಎಲ್ಲರ ಅನುಕೂಲಕ್ಕೆ ಅನುಗುಣವಾಗಿ ಆ. 20 ರ ಬದಲಿಗೆ ಆ. 27 ರಂದು ರಾಜ್ಯದ 11 ಸಾವಿರ ಕಡೆಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಬೃಹತ್ ಮಟ್ಟದಲ್ಲಿ ಚಾಲನೆ ನೀಡಲು ತೀರ್ಮಾನಿಸಿದ್ದೇವೆ. ಈ ಯೋಜನೆಯಲ್ಲಿ ನೋಂದಣಿಯಾಗಿರುವ 1.05 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಹಣ ಖಾತೆಗೆ ಜಮೆ ಆಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ ಕುರಿತ ಸಭೆ ಬಳಿಕ ವಿಕಾಸಸೌಧದಲ್ಲಿ ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:

“ಬೆಳಗಾವಿಯಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ಗ್ರಾಮ ಪಂಚಾಯತಿಯಲ್ಲಿ ನೇರಪ್ರಸಾರವಾಗಲಿದೆ. ಪ್ರತಿ ಪಂಚಾಯಿತಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಪ್ರತಿ ವಾರ್ಡಿನಲ್ಲಿ ಸಂಭ್ರಮದಿಂದ ಆಚರಣೆ ಮಾಡುವಂತೆ ಸೂಚನೆ ನೀಡಿದ್ದೇವೆ. ಜೂಮ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ವ್ಯವಸ್ಥೆ ಮಾಡಿದ್ದೇವೆ.
ರಾಜ್ಯದ ನಾನಾ ಕಡೆ ಅನೇಕ ಹೆಣ್ಣು ಮಕ್ಕಳು ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರುವ ದಿನ ಮನೆಯ ಮುಂದೆ ರಂಗೋಲಿ ಹಾಕಿ ಸಂಭ್ರಮ ಆಚರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಪಕ್ಷಾತೀತವಾಗಿ ಎಲ್ಲರೂ ಗೃಹಲಕ್ಷ್ಮಿಯನ್ನು ಆಹ್ವಾನ ಮಾಡಿಕೊಳ್ಳಬೇಕು” ಎಂದರು.
ಗುತ್ತಿಗೆದಾರರು ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಿದ್ದಾರೆ ಎನ್ನುವ ಪತ್ರಕರ್ತರ ಪ್ರಶ್ನೆಗೆ “ಅವರಿಗೆ ಆಲ್ ದಿ ಬೆಸ್ಟ್, ಒಳ್ಳೆಯದಾಗಲಿ, ಈ ಹೋರಾಟದ ಹಿಂದೆ ಇರುವವರಿಗೂ ಒಳ್ಳೆಯದಾಗಲಿ. ಆದರೆ ನ್ಯಾಯ ಏನಿದೆಯೊ ಅದರಂತೆ ನಾವು ನಡೆಯಲಿದ್ದೇವೆ” ಎಂದು ಉತ್ತರಿಸಿದರು.