ಹಾಸನ:
ನವೆಂಬರ್ 2ರಿಂದ 15ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಬಾರಿ ದಿನದ 24 ಗಂಟೆಯೂ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ಹಾಸನಂಬಾ ಜಾತ್ರಾ ಮಹೋತ್ಸವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು, ಮಂಗಳವಾರ ಪೂರ್ವಭಾವಿ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಸಚಿವರು, ಕಳೆದ ವರ್ಷ ದೇವಾಲಯಕ್ಕೆ 6 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಆಗಮಿಸಿದ್ದರು. ಶಕ್ತಿ ಯೋಜನೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚು ಜನರು ಭೇಟಿ ನೀಡುವ ಸಾಧ್ಯತೆಗಳಿವೆ. ಈ ಬಾರಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸುವ ಸಾಧ್ಯತೆಗಳಿವೆ. ಹೆಚ್ಚು ಭಕ್ತರು ಆಗಮಿಸುವುದರಿಂದ ಹಾಸನಾಂಬೆ ಮಹೋತ್ಸವ ವೈಭವದಿಂದ ನಡೆಸಲಾಗುತ್ತದೆ. ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಅಚ್ಚುಕಟ್ಟಾಗಿ ಸಿದ್ಧತೆ ನಡೆಯಬೇಕು, ಯಾವುದೇ ಕುಂದುಕೊರತೆ ಮತ್ತು ಗಡಿಬಿಡಿ ಆಗಬಾರದೆಂದು ಸೂಚನೆ ನೀಡಿದರು.
ಒಟ್ಟು 14 ದಿನಗಳು ದೇವಿಯ ದೇಗುಲದ ಬಾಗಿಲು ತೆರೆಯಲಿದ್ದು, ಮೊದಲ ಹಾಗೂ ಕೊನೆಯ ದಿನ ಪೂಜಾ ವಿಧಿ ವಿಧಾನಗಳ ಕಾರಣ ಎರಡು ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬಿಟ್ಟರೆ ಒಟ್ಟು 12 ದಿನಗಳು 24 ಗಂಟೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಬಾರಿ ಅದ್ಧೂರಿಯಾಗಿ ಜಾತ್ರೆ ನಡೆಸಬೇಕು. ಈ ಸಂಬಂಧ ಅಗತ್ಯ ತಯಾರಿ ಮಾಡಿಕೊಳ್ಳಿ ಎಂದು ಸಚಿವರು ಸೂಚನೆ ನೀಡಿದ್ದಾರೆ.
ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಹಾಸನ ಎಂದರೆ ಶಿಲ್ಪಕಲೆಗಳ ತವರೂರು. ಪ್ರವಾಸೋದ್ಯಮವಾಗಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚು ಪ್ರಚಾರ ಕೊಟ್ಟು ಹಾಸನಾಂಬೆ ಮೂಲಕ ಹೆಚ್ಚು ಪ್ರವಾಸಿಗರನ್ನು ಸೆಳೆಯಲಾಗುವುದು. ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುವುದು. ಅಧಿಕಾರಿಗಳು ಮತ್ತು ಹಿರಿಯ ನಾಗರಿಕರೊಂದಿಗೆ ಮತ್ತೊಮ್ಮೆ ಸಭೆ ನಡೆಸಲಾಗುತ್ತದೆ. ನಂತರ ಜಿಲ್ಲಾ ಪ್ರಾಧಿಕಾರವು ಕಾರ್ಯಕ್ರಮಗಳ ವಿವರವಾದ ಪಟ್ಟಿಯನ್ನು ಸಿದ್ಧಪಡಿಸುತ್ತದೆ ಎಂದು ಜಿಲ್ಲಾಧಿಕಾರಿ ಸಿ ಸತ್ಯಬಾಮಾ ಅವರು ಹೇಳಿದರು.